Wednesday, August 17, 2022

Latest Posts

ಉಡುಪಿ| ಮಹಾಮಳೆಯಿಂದ ಸೆಪ್ಟೆಂಬರ್ ನಲ್ಲಿ ಹಾನಿಯಾದ ಮನೆಗಳಿಗೆ 5 ಲ.ರೂ. ಪರಿಹಾರ ನೀಡಲು ಸರಕಾರ ಆದೇಶ

ಉಡುಪಿ: ಜಿಲ್ಲೆಯಲ್ಲಿ ಮಹಾಮಳೆಯಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಸಂಪೂರ್ಣವಾಗಿ ಕುಸಿದ ಹಾಗೂ ಶೇ. 25-75ರಷ್ಟು ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಮೊತ್ತವನ್ನು ನೀಡಲು ಕರ್ನಾಟಕ ಸರಕಾರ ಶುಕ್ರವಾರ ಆದೇಶ ನೀಡಿದೆ.
ಆಗಸ್ಟ್ 7ರಂದು ಪ್ರವಾಹ ಬಾಧಿತ ಗ್ರಾಮಗಳ ಸಂತ್ರಸ್ತರ ಪ್ರತೀ ಕುಟುಂಬಕ್ಕೆ ಬಟ್ಟೆ-ಬರೆ ಹಾಗೂ ದಿನಬಳಕೆಯ ವಸ್ತುಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 10ಸಾವಿರ ರೂ. ನೀಡಲು ಹಾಗೂ ಕುಸಿದ ಮನೆಗಳ ಪುನರ್ ನಿರ್ಮಾಣಕ್ಕೆ 5ಲಕ್ಷ ರೂ. ಪರಿಹಾರ ಮೊತ್ತವನ್ನು ಸರಕಾರ ಘೋಷಿಸಿ, ಆದೇಶಿಸಿತ್ತು. ಆದರೆ ಅದು ಕೇವಲ ಆಗಸ್ಟ್ ತಿಂಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಇದೀಗ ಸರಕಾರ ಆ ಆದೇಶವನ್ನು ಸೆಪ್ಟೆಂಬರ್ ತಿಂಗಳಿಗೂ ಮುಂದುವರಿಸಲು ಆದೇಶಿಸಿದೆ.
ಮುಂದುವರಿದ ಆದೇಶದಂತೆ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ, ಸಂಪೂರ್ಣವಾಗಿ ಹಾನಿಯಾದ ಮನೆಗೆ 5ಲಕ್ಷ ರೂ., ಶೇ. 25-75ರಷ್ಟು ಹಾನಿಯಾದ ಮನೆಗೆ (ಸಂಪೂರ್ಣವಾಗಿ ಕೆಡವಿ ಹೊಸದು ನಿರ್ಮಿಸಲು) 5ಲಕ್ಷ ರೂ. ನೀಡಲಾಗುತ್ತದೆ. ಶೇ. 25-75ರಷ್ಟು ಹಾನಿಯಾದ ಮನೆಗೆ (ದುರಸ್ತಿ ಮಾಡಲು) 3ಲಕ್ಷ ರೂ. ದೊರೆಯಲಿದೆ. ಈ ಮೊದಲು ಎಲ್ಲದಕ್ಕೂ ಗರಿಷ್ಠ 95,100 ರೂ. ಮಾತ್ರ ನೀಡಲು ಅವಕಾಶವಿತ್ತು. ಅದಲ್ಲದೇ ಶೇ. 15ರಿಂದ 25ರಷ್ಟು ಅಲ್ಪಸ್ವಲ್ಪ ಹಾನಿಯಾದ ಮನೆಗಳ ದುರಸ್ತಿಗೆ 50 ಸಾವಿರ ರೂ. ನೀಡಲಾಗುತ್ತದೆ. ಇದಕ್ಕಾಗಿ ಮೊದಲು ಕೇವಲ 5,200 ರೂ. ನೀಡಲಾಗುತ್ತಿತ್ತು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಆಗಸ್ಟ್ ತಿಂಗಳ ಆದೇಶವನ್ನು ಸೆಪ್ಟೆಂಬರ್ ತಿಂಗಳಿಗೂ ಮುಂದುವರಿಸುವುದಕ್ಕೆ ರಾಜ್ಯ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಮನವಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ್ ಸೂಚನೆಯಂತೆ ಶುಕ್ರವಾರ ಕಂದಾಯ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿಯವರು ಸೇರ್ಪಡೆ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!