ಉಡುಪಿ| ಮೂವರಿಗೆ ಸೋಂಕು: ಕುಂದಾಪುರದ ಕೊವೀಡ್ ಆಸ್ಪತ್ರೆಗೆ ಸ್ಥಳಾಂತರ

0
186

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂವರಲ್ಲಿ ನೋವೆಲ್ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಆರೋಗ್ಯ ಇಲಾಖೆಯ ಪ್ರಕಾರ ಅಧಿಕೃತವಾಗಿ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50ಕ್ಕೇರಿದೆ.
ಹೊಸದಾಗಿ ಸೋಂಕು ಕಾಣಿಸಿಕೊಂಡವರಲ್ಲಿ ಇಬ್ಬರು ಪುರುಷರು 55 ಮತ್ತು 31ರ ಹರೆಯದವರಾಗಿದ್ದಾರೆ. ಇನ್ನೊಬ್ಬರು ಮಹಿಳೆ 48 ವರ್ಷ ಪ್ರಾಯದವರಾಗಿದ್ದಾರೆ. ಈ ಮೂವರು ಕೂಡ ಮುಂಬೈನಿಂದ ಉಡುಪಿ ಜಿಲ್ಲೆಗೆ ಮೇ 11ರಂದು ಜೊತೆಯಲ್ಲಿ ಆಗಮಿಸಿದ್ದಾರೆ. ಎಲ್ಲರೂ ಬೈಂದೂರು ತಾಲೂಕಿನವರಾಗಿದ್ದು, ಅಲ್ಲಿಯೇ ಒಂದೇ ದಿಗ್ಬಂಧನಕ್ಕೆ ಕೇಂದ್ರದಲ್ಲಿ ಸಾಂಸ್ಥಿಕ ದಿಗ್ಬಂಧನಕ್ಕೊಳಗಾಗಿದ್ದರು. ಅವರಿಗೆ ಕೊರೋನಾ ಸೋಂಕು ದೃಢವಾಗುತಿದ್ದಂತೆ ಅವರನ್ನು ಕುಂದಾಪುರದ ಕೊವೀಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
319 ಮಂದಿಗೆ ಪ್ರಾಥಮಿಕ ಸಂಪರ್ಕ
ಸೋಂಕಿತ ಮೂರು ಮಂದಿಗೆ ಒಟ್ಟು 319 ಮಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಇತ್ತು. ದ್ವಿತೀಯ ಹಂತದಲ್ಲಿ 179 ಮಂದಿ ಈ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಮುಂಬೈಯಿಂದ ಒಟ್ಟಿಗೆ ಪ್ರಯಾಣಿಸಿರುವುದು, ಒಂದೇ ಕಡೆ ದಿಗ್ಬಂಧನದಲ್ಲಿರುವುದು ಎಲ್ಲ ಸೇರಿ ಮೂರು ಜನರ ಸಂಪರ್ಕಕ್ಕೆ ಬಂದು ಪ್ರಥಮ ಮತ್ತು ದ್ವಿತೀಯ ಹಂತದ ಸಂಪರ್ಕಿತರು ಒಟ್ಟು 498 ಮಂದಿ ಇದ್ದಾರೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 53 ಮಂದಿಯಲ್ಲಿ ಸೋಂಕು ಕಂಡುಬಂದರೂ ಈ ಪೈಕಿ ಚಿತ್ರದುರ್ಗದ ಬಾಲಕಿಯ ವರದಿ ನೆಗೆಟಿವ್ ಆಗಿದೆ. ಉಳಿದಂತೆ ಉಡುಪಿ ಜಿಲ್ಲೆಯ ತಾಯಿ ಮತ್ತು ಮಗು ಇಬ್ಬರು ತ.ಕ. ಜಿಲ್ಲೆಯ ಶಿರಸಿಯಲ್ಲಿ ದಿಗ್ಬಂಧನದಲ್ಲಿದ್ದಾಗ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ಪ್ರಕಾರ ಈ ಪ್ರಕರಣಗಳು ಅದೇ ಜಿಲ್ಲೆಯಲ್ಲಿ ವರದಿಯಾಗುತ್ತವೆ. ಆದ್ದರಿಂದ ಉಡುಪಿ ಜಿಲ್ಲೆಯಲ್ಲಿ ಅಧಿಕೃತವಾಗಿ ಕೋವಿಡ್ ಖಚಿತ ಪ್ರಕರಣಗಳು ಒಟ್ಟು 50 ಆಗಿವೆ.

LEAVE A REPLY

Please enter your comment!
Please enter your name here