Wednesday, August 10, 2022

Latest Posts

ಉಡುಪಿ| ಮೃತಪಟ್ಟ ವ್ಯಕ್ತಿಯ ಪತ್ನಿ, ಮಗನಿಗೂ ಈಗ ಕೊರೋನಾ ವೈರಸ್!

ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ತೆಕ್ಕಟ್ಟೆಯ ಮನೆಯಲ್ಲಿ ಮೃತಪಟ್ಟ ನಂತರ ಕೋವಿಡ್ ಸೋಂಕು ದೃಢಪಟ್ಟ ವ್ಯಕ್ತಿಯ ಪತ್ನಿ ಮತ್ತು ಮಗನಿಗೂ ವೈರಸ್ ಅಂಟಿರುವುದು ಪತ್ತೆಯಾಗಿದೆ.
ಸೋಂಕಿತ ಇಬ್ಬರನ್ನೂ ಆರೋಗ್ಯ ಇಲಾಖೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದೆ. ಮನೆ ಪರಿಸರವನ್ನು ನಿಯಂತ್ರಿತ ವಲಯವಾಗಿ ಗುರುತಿಸಲಾಗಿದೆ. ಅಲ್ಲದೇ ಇಡೀ ಗ್ರಾಮವನ್ನು ಬಫರ್ ವಲಯವಾಗಿ ಘೋಷಿಸಲಾಗಿದೆ.
ಮೃತ ಸೋಂಕಿತನ ಕುಟುಂಬವು ಗುರುವಾರ ಕಾರಿನಲ್ಲಿ ಮಹಾರಾಷ್ಟ್ರದಿಂದ ಬಂದಿತ್ತು. ಪತ್ನಿ, ಪುತ್ರನೊಂದಿಗೆ 54ರ ಹರೆಯದ ವ್ಯಕ್ತಿ ಕಾರು ಚಾಲಕನೊಂದಿಗೆ ಬಂದಿದ್ದರು. ಜಿಲ್ಲಾ ಸ್ವೀಕೃತಿ ಕೇಂದ್ರ (ರಿಸಿವಿಂಗ್ ಸೆಂಟರ್)ದಲ್ಲಿ ಆರೋಗ್ಯ ತಪಾಸಣೆಗೊಳಪಟ್ಟು, ಯಾವುದೇ ರೋಗ ಲಕ್ಷಣ ಗೋಚರಿಸದೇ ಇರುವುದರಿಂದ ಅವರನ್ನು ಗೃಹ ದಿಗ್ಬಂಧನಕ್ಕೆ ಕಳುಹಿಸಲಾಗಿತ್ತು. ಗುರುವಾರ ಸಂಜೆ ವ್ಯಕ್ತಿಯು ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ನಂತರ ಸೋಂಕಿತನ ಜೊತೆಯಲ್ಲಿ ಬಂದ ಪತ್ನಿ, ಪುತ್ರ ಮತ್ತು ಕಾರು ಚಾಲಕನ ಗಂಟಲ ದ್ರವದ ಮಾದರಿ ಪರೀಕ್ಷೆ ನಡೆಸಿದಾಗ ಪತ್ನಿ ಮತ್ತು ಮಗನ ದೇಹದಲ್ಲಿ ವೈರಸ್ ಇರುವುದು ಖಚಿತವಾಗಿದೆ. ಆದರೆ ಚಾಲಕನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ದೇಹವು ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ಅಂತಿಮ ಸಂಸ್ಕಾರದ ಬಗ್ಗೆ ನಾಳೆ ನಿರ್ಧಾರವಾಗಲಿದೆ ಎಂದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss