Sunday, August 14, 2022

Latest Posts

ಉಡುಪಿ| ರಕ್ತದಾನ ಮಾಡಿ ಮಾದರಿಯಾದ ಕುಂದಾಪುರ ಡಿ.ಎಫ್.ಒ. ಆಶೀಶ್ ರೆಡ್ಡಿ

ಉಡುಪಿ: ಭಾರತದಲ್ಲಿ ಪ್ರತೀ ವರ್ಷ 20 ಲಕ್ಷ ಯೂನಿಟ್ ರಕ್ತದ ಕೊರತೆ ಕಂಡುಬರುತ್ತಿದೆ. ಆದ್ದರಿಂದ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ತಿಳಿಸಿದ್ದಾರೆ.

ಅವರು ಶನಿವಾರ ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ, ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಉಡುಪಿಯ ಪುರಭವನದ ಬಳಿ ಗ್ರಂಥಾಲಯ ಕಟ್ಟಡದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ, ಶಿಬಿರದಲ್ಲಿ ಸ್ವಯಂ ರಕ್ತದಾನ ಮಾಡಿದರು.

ದೇಶದಾದ್ಯಂತ ಲಾಕ್‌ಡೌನ್ ಅವಧಿಯಲ್ಲಿ ರಕ್ತದ ಕೊರತೆ ಹೆಚ್ಚಾಗಿದ್ದು, ಇಂತಹ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನ ಮಾಡಬೇಕು. ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸುವ ಜೊತೆಗೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸಮಾಜಕ್ಕೆ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ದೊರೆಯುತ್ತದೆ. ವಿರಳ ರಕ್ತದ ಗುಂಪುಗಳಲ್ಲಿ ಒಂದಾಗಿರುವ ಬಿ ನೆಗೆಟಿವ್ ರಕ್ತ ಹೊಂದಿರುವ ತಾನು, ಈ ಹಿಂದೆ ತುರ್ತು ಚಿಕಿತ್ಸೆಗೆ ಅಗತ್ಯವಿದ್ದ ರೋಗಿಯೊಬ್ಬರಿಗೆ ರಕ್ತ ನೀಡಿದ್ದು, ಇಂದು ಸ್ವಯಂ ಪ್ರೇರಿತವಾಗಿ ನೀಡುತ್ತಿದ್ದೇನೆ ಎಂದ ಆಶೀಶ್ ರೆಡ್ಡಿ, ಸ್ವತಃ ರಕ್ತದಾನ ಮಾಡಿ ಮಾದರಿಯಾದರು.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಉಡುಪಿ ಘಟಕದ ಅಧ್ಯಕ್ಷ ಮುಂಜುನಾಥ ನಾಯ್ಕ್ ಮಾತನಾಡಿ, ಕೋವಿಡ್ 19 ಪ್ರಯುಕ್ತದ ಲಾಕ್‌ಡೌನ್‌ನಿಂದ ರಕ್ತದ ಕೊರತೆಯಿರುವುದನ್ನು ಅರಿತು ಸಂಘದ ವತಿಯಿಂದ ತುರ್ತಾಗಿ ರಕ್ತದಾನ ಶಿಬಿರ ಆಯೋಜಿಸಿದೆ. ಸಂಘದ ವತಿಯಿಂದ 66,666 ರೂ.ಗಳನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಲಾಗುವುದು ಎಂದು ಹೇಳಿದರು.

ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಉಡುಪಿ ಘಟಕದ ಖಜಾಂಚಿ ಅಭಿಲಾಷ್, ದೇವರಾಜ್ ಪಾಣ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ ನಿರೂಪಿಸಿ, ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss