ಉಡುಪಿ: ರಾಜ್ಯ ಸರಕಾರದ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷೆಯ ’ಸಪ್ತಪದಿ’ ಉಚಿತ ವಿವಾಹ ಯೋಜನೆಯನ್ನು ಮಾರ್ಪಾಡು ಮಾಡಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ವರ್ಷವಿಡೀ ಸಪ್ತಪದಿ ಯೋಜನೆಯಡಿ ವಿವಾಹವಾಗಲು ಅವಕಾಶ ಸಿಗಲಿದೆ.
’ಹೊಸ ದಿಗಂತ’ಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ವಿಚಾರ ತಿಳಿಸಿದ್ದಾರೆ.
ಕೋವಿಡ್-19 ವಿಪತ್ತಿನಿಂದಾಗಿ ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲು ಉದ್ದೇಶಿಸಿದ ಸಪ್ತಪದಿ ಉಚಿತ ವಿವಾಹ ಯೋಜನೆ ಸ್ಥಗಿತವಾಗಿದೆ. ರಾಜ್ಯದ ‘ಎ’ ದರ್ಜೆಯ ವಿವಿಧ ದೇವಸ್ಥಾನಗಳಲ್ಲಿ ವಿವಾಹವಾಗಲು ಬಯಸಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಅವುಗಳಲ್ಲಿ ಕೆಲವರಷ್ಟೇ ಮದುವೆಗೆ ಬಾಕಿ ಇರಬಹುದು. ಅವರಿಗೆ ವಿವಾಹ ಮಾಡಲು ಮೊದಲು ಯೋಚನೆ ಮಾಡುತ್ತಿದ್ದೇವೆ. ಅದಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಪ್ರಮಾಣಿತ ಕಾರ್ಯಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆ ನೀಡುವ ಮಾನದಂಡಗಳನ್ನು ಅಳವಡಿಸಿ, ಪ್ರಮಾಣಿತ ಕಾರ್ಯಸೂಚಿಯಂತೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ತಿಂಗಳೊಳಗೆ ವಿವಾಹ ಮುಹೂರ್ತ:
ಇನ್ನು ಮುಂದೆ ಸಾಮೂಹಿಕ ಮದುವೆ ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ಈ ಸಪ್ತಪದಿ ಯೋಜನೆಗೆ ತಿದ್ದುಪಡಿ ತಂದು, ವಿವಾಹವಾಗಲು ಅಪೇಕ್ಷಿತರು ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ಪ್ರಥಮ ಮುಹೂರ್ತದಲ್ಲಿ ವಿವಾಹ ಮಾಡಬೇಕೆನ್ನುವ ಚಿಂತನೆ ಇದೆ. ಭವಿಷ್ಯದಲ್ಲಿ ಯಾರೇ ಇಂತಹ ದೇವಸ್ಥಾನದಲ್ಲಿ ಮದುವೆಯಾಗಬೇಕು ಎಂದು ಅರ್ಜಿ ಕೊಟ್ಟರೆ, ನಂತರದ ಮೊದಲ ಮುಹೂರ್ತಗಳಲ್ಲಿ ಮದುವೆ ಮಾಡುವುದಕ್ಕೆ ಅವಕಾಶ ಇರಲಿದೆ. ಅಲ್ಲದೇ ಈ ಯೋಜನೆ ಇಡೀ ವರ್ಷ ಚಾಲ್ತಿಯಲ್ಲಿರುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು.
ಕುಕ್ಕೆಯಲ್ಲಿ ಗೋಶಾಲೆಗೆ 20 ಎಕರೆ ಜಾಗ:
ರಾಜ್ಯದ 25 ’ಎ’ ದರ್ಜೆಯ ಧಾರ್ಮಿಕ ದತ್ತಿ ಇಲಾಖಾ ಅಧೀನ ದೇವಸ್ಥಾನಗಳಲ್ಲಿ ಗೋಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಅವುಗಳಿಗೆ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಇದರಲ್ಲಿ ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಶಾಲೆ ಪ್ರಾರಂಭಿಸುವುದಕ್ಕೆ ಎರಡು ಕಡೆ ತಲಾ 10 ಎಕರೆ ಜಾಗವನ್ನು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ದ.ಕ. ಜಿಲ್ಲೆಯ ಪೊಳಲಿ ದೇವಸ್ಥಾನಗಳಲ್ಲಿ ಜಾಗವನ್ನು ಗುರುತಿಸಲಾಗುತ್ತಿದೆ. ರಾಜ್ಯದ ಉಳಿದ ದೇವಸ್ಥಾನಗಳಲ್ಲಿಯೂ ಈ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಒಂದು ತಿಂಗಳಲ್ಲಿ ಹೊಸ ಸಾಫ್ಟ್ ವೇರ್ ಅಳವಡಿಕೆ:
ಹಿಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನ ದೇವಸ್ಥಾನಗಳ ಆರ್ಥಿಕ ವ್ಯವಹಾರವನ್ನು ಕೇಂದ್ರೀಕೃತ ಖಾತೆಯಿಂದ ನಡೆಸುವುದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಪೈಲಟ್ ಯೋಜನೆಯನ್ನು ಅನುಷ್ಠಾನಿಸಿ, ಬಳಿಕ ಇಡೀ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ಇದರಲ್ಲಿ ದೇವಸ್ಥಾನದ ಪ್ರತಿಯೊಂದು ಆರ್ಥಿಕ ಚಟುವಟಿಕೆಯೂ ಇದರ ಮೂಲಕವೇ ನಡೆಸಲಾಗುತ್ತದೆ. ಅವ್ಯವಹಾರವನ್ನು ತಡೆಗಟ್ಟಲು ಅನುಕೂಲವಾಗಲಿದೆ ಎಂದು ಹಿಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.