ಉಡುಪಿ: ಜಿಲ್ಲೆಯ ಕಾಪು ಒಂದೇ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ 3.85 ಲಕ್ಷ ರೂ. ನಷ್ಟ ಉಂಟಾಗಿದೆ. ಒಟ್ಟು ಐದು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.
ತಾಲೂಕಿನ ಬಡಾ ಗ್ರಾಮದ ಬೇಬಿ ಪೂಜಾರ್ತಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿ ಉಂಟಾಗಿದೆ. ಇದರಿಂದಾಗಿ ಅವರಿಗೆ 3ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ಗ್ರಾಮದ ಚಂದ್ರಯ್ಯ ಆಚಾರಿ ಅವರ ಮನೆಯ ಕಾಂಪೌಂಡ್ ಮತ್ತು ಶೆಡ್ ಮೇಲೆ ಮರ ಬಿದ್ದಿದೆ. ಪರಿಣಾಮ ಭಾಗಶಃ ಹಾನಿ ಸಂಭವಿಸಿದ್ದು, 25ಸಾವಿರ ರೂ. ನಷ್ಟವಾಗಿದೆ. ಉಳಿಯಾರಗೋಳಿ ಗ್ರಾಮದ ಆಶಾ ಕರ್ಕಡ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 25ಸಾವಿರ ರೂ. ಮತ್ತು ಅದೇ ಗ್ರಾಮದ ಸರಸ್ವತಿ ಅವರ ಮನೆ ಹೆಂಚು ಹಾರಿ ಹೋಗಿ 25ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಎಲ್ಲೂರು ಗ್ರಾಮದ ಮೊಹಮ್ಮದ್ ಅಜ್ಮಲ್ ಅವರ ಮನೆ ಮೇಲೆ ಮರ ಬಿದ್ದು 10 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.