Thursday, August 11, 2022

Latest Posts

ಉಡುಪಿ| ವಿದ್ಯುತ್ ಸರಬರಾಜು ಲೈನ್‌ಗಳಿಗೆ ತಾಗುವ ಮರದ ಕೊಂಬೆಗಳ ತೆರವು

ಉಡುಪಿ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡಿನ ಕಾಡುಹೊಳೆ, ನಂದಾರು ಗುಡ್ಡೆಯಂಗಡಿ ಸುಕುಡಿಬೈಲು ಪರಿಸರದ ವಿದ್ಯುತ್ ಸರಬರಾಜು ಲೈನ್‌ಗಳಿಗೆ ತಾಗುವ ಮರದ ಕೊಂಬೆಗಳನ್ನು ಭಾನುವಾರ ಕತ್ತರಿಸಲಾಯಿತು. ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಜನ ಶ್ರಮದಾನದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ಗ್ರಾ.ಪಂ. ಸದಸ್ಯರಾದ ವಸಂತ ನಾಯಕ್, ವಿಜಯಾ ನಾಯ್ಕ್, ಕಾಡುಹೊಳೆಯ ಯುವಶಕ್ತಿ ಯುವಕ ಮಂಡಲ ಮತ್ತು ಸ್ಪೂರ್ತಿ ಯುವತಿ ಮಂಡಲದ ಸದಸ್ಯರು, ಸ್ಥಳೀಯರು, ಮೆಸ್ಕಾಂ ಅಜೆಕಾರು ಸೆಕ್ಷನ್ ಅಧಿಕಾರಿ ಉಪೇಂದ್ರ ವಾಗ್ಲೆ ನೇತೃತ್ವದ ಮೆಸ್ಕಾಂ ತಂಡ ಶ್ರಮದಾನದಲ್ಲಿ ಕೈಜೋಡಿಸಿದರು.
ವಿದ್ಯುತ್ ಲೈನ್ ದುರಸ್ತಿ, ವಿದ್ಯುತ್ ಕಂಬ ಬದಲಾವಣೆ, ಹೊಸ ಕಂಬಗಳ ಅಳವಡಿಕೆ ಸಹಿತ ದುರಸ್ತಿ ಕಾರ್ಯವನ್ನು ಜೆ.ಇ. ಉಪೇಂದ್ರ ವಾಗ್ಲೆ ನೇತೃತ್ವದಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಮಳೆಗಾಲದ ಆರಂಭದಲ್ಲಿ ವಿದ್ಯುತ್ ಲೈನ್ ದುರಸ್ತಿ, ಮರದ ಕೊಂಬೆಗಳ ಕಟಾವು ಮಾಡಿದರೆ ವಿದ್ಯುತ್ ಸಮಸ್ಯೆಯ ವ್ಯತ್ಯಯವನ್ನು ತಪ್ಪಿಸಬಹುದು. ಮೆಸ್ಕಾಂ ಜೊತೆಗೆ ನಾವೆಲ್ಲ ಸೇರಿದಾಗ ಕೆಲಸಗಳು ಇಲಾಖೆಗೂ ಸುಲಭವಾಗಿ ಊರಿಗೂ ಪ್ರಯೋಜನ ಆಗುತ್ತದೆ. ನಿರೀಕ್ಷೆಗೂ ಮೀರಿ ಸ್ಥಳೀಯರು ಸಹಕಾರ ನೀಡಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಜನರ ಸಹಕಾರಕ್ಕೆ ಮೆಸ್ಕಾಂ ಮೆಚ್ಚುಗೆ
ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಮೆಸ್ಕಾಂನೊಂದಿಗೆ ಕೈಜೋಡಿಸಿದರೆ ಅತ್ಯಂತ ಸುಲಭದಲ್ಲಿ ಎಲ್ಲ ಸಮಸ್ಯೆಯನ್ನು ಸರಿಪಡಿಸಿ ಗ್ರಾಮಸ್ಥರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ. ಕಾಡುಹೊಳೆಯ ಗ್ರಾಮಸ್ಥರು ಮೆಸ್ಕಾಂಗೆ ವಿಶೇಷ ಸಹಕಾರ ನೀಡಿದ್ದಾರೆ ಎಂದು ಜೆ.ಇ. ಉಪೇಂದ್ರ ವಾಗ್ಲೆ ಕೃತಜ್ಞತೆ ಸಲ್ಲಿಸಿದ್ದಾರೆ. ಗ್ರಾ.ಪಂ. ಸದಸ್ಯರ ಕಾಳಜಿಗೆ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss