Saturday, June 25, 2022

Latest Posts

ಉಡುಪಿ| ಶಿರಿಯಾರದ ರೈಸ್ ಮಿಲ್ ಮೇಲೆ ದಾಳಿ: 600 ಕ್ವಿಂಟಾಲ್‌ಗೂ ಅಧಿಕ ಪಡಿತರ ಅಕ್ಕಿ ವಶ

ಉಡುಪಿ: ಜಿಲ್ಲಾಧಿಕಾರಿಯವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರದಲ್ಲಿ ಸೋಮವಾರ ರೈಸ್ ಮಿಲ್ ಮೇಲೆ ದಾಳಿ ನಡೆಸಿದ ಡಿ.ಸಿ. ಜಗದೀಶ ಅವರ ನೇತೃತ್ವದ ತಂಡವು 600 ಕ್ವಿಂಟಾಲ್‌ಗೂ ಅಧಿಕ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದೆ.
ಪ್ರಕರಣದಲ್ಲಿ ಮೂವರು ಲಾರಿ ಚಾಲಕರು ಮತ್ತು ಕ್ಲೀನರ್ ಸೇರಿದಂತೆ 6ಲಾರಿ ಟ್ರಕ್‌ಗಳು, ಎರಡು 407 ಟೆಂಪೋ, ಒಂದು ಟಾಟಾ 909 ಹಾಗೂ ಮಾರುತಿ ಇಕೋ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಸಾಗುತ್ತಿದೆ.
ಶಿರಿಯಾರದ ಕಲ್ಮರ್ಗಿಯ ರೈಸ್ ಮಿಲ್‌ನಲ್ಲಿ ರೇಶನ್ ಅಕ್ಕಿಯನ್ನು ಪಾಲೀಶ್ ಮಾಡಿ, ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಅನ್ವಯ ಈ ದಾಳಿ ನಡೆಸಲಾಗಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮತ್ತು ದಾಸ್ತಾನು ಮಾಡುತ್ತಿರುವ ಕುರಿತು ಕಳೆದ ಒಂದು ತಿಂಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ದಾಳಿಯ ಯೋಜನೆ ರೂಪಿಸಲಾಗಿತ್ತು. ಅದರಂತೆ ಸಂಜೆ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಖುದ್ದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಮಿಲ್‌ಗೆ ದಾಳಿ ನಡೆಸಿದರು.
ಈ ವೇಳೆ ಎರಡು ಟ್ರಕ್‌ಗಳಲ್ಲಿ ಅಕ್ಕಿಯ ಚೀಲಗಳು ಲೋಡ್ ಆಗಿದ್ದವು. ಇನ್ನೊಂದು ಟ್ರಕ್‌ನಲ್ಲಿ ಅರ್ಧ ಲೋಡ್ ಆಗಿರುವುದು ಕಂಡು ಬಂದಿದೆ. ಮಿಲ್‌ನ ಒಳಗೂ ಸಾಕಷ್ಟು ಗೋಣಿಚೀಲಗಳಲ್ಲಿ ಅಕ್ಕಿ ದಾಸ್ತಾನು ಇರುವುದು ಪತ್ತೆಯಾಗಿದೆ. ಸ್ಥಳಕ್ಕೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳನ್ನು ಕರೆಸಲಾಗಿದ್ದು, ಎಷ್ಟು ಪ್ರಮಾಣದ ಅಕ್ಕಿ ಇದೆ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ’ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.
ದಾಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಗಜೇಂದ್ರ, ಆಹಾರ ನಿರೀಕ್ಷಕರಾದ ಪಾರ್ವತಿ ಮತ್ತು ಸುರೇಶ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss