ಉಡುಪಿ: ನಿತ್ಯ ಷೋಡಶ ಉಪಚಾರಗಳೊಂದಿಗೆ 14 ಪೂಜೆಗಳನ್ನು ಸ್ವೀಕರಿಸುವ ಉಡುಪಿಯ ಕಡೆಗೋಲ ಶ್ರೀಕೃಷ್ಣನಿಗೆ, ಇಂದಿನಿಂದ ಒಂದು ತಿಂಗಳು ಭರ್ತಿ 15 ಪೂಜೆಗಳು ಅರ್ಪಣೆಯಾಗಲಿವೆ.
ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷವಾಗಿ ನಡೆಯುವ ’ಪಶ್ಚಿಮ ಜಾಗರ’ ಪೂಜೆಯು ಆಶ್ವಯುಜ ಮಾಸದ ಶುಕ್ಲಪಕ್ಷದ ಏಕಾದಶಿ ದಿನವಾದ ಇಂದಿನಿಂದ ಆರಂಭವಾಗಿದೆ. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಈ ವರ್ಷದ ಮೊದಲ ಪಶ್ಚಿಮ ಜಾಗರ ಪೂಜೆಯನ್ನು ನೆರವೇರಿಸಿದರು.
ಕೃಷ್ಣಮಠದಲ್ಲಿ ಮುಂಜಾನೆ ನಿರ್ಮಾಲ್ಯ, ಉಷಾಃಕಾಲ, ಅಕ್ಷಯಪಾತ್ರೆ ಪೂಜೆ, ಪಂಚಾಮೃತ ಅಭಿಷೇಕದ ನಂತರ ಪಶ್ಚಿಮ ಜಾಗರ ಪೂಜೆ ನಡೆಯುತ್ತದೆ. ಆನಂತರ ಉಳಿದ ಪೂಜೆಗಳನ್ನು ನೆರವೇರಿಸಲಾಗುತ್ತದೆ.
ಕಾರ್ತಿಕ ಮಾಸ ಶುಕ್ಲಪಕ್ಷದ ಏಕಾದಶಿಯವರೆಗೆ ಈ ವಿಶೇಷ ವಾರ್ಷಿಕ ಪೂಜೆ ನಡೆಯುತ್ತದೆ. ಹಲವು ದೇವಾಲಯಗಳಲ್ಲಿ, ವಿಶೇಷವಾಗಿ ಮಠ ಪರಂಪರೆಯ ದೇವಸ್ಥಾನಗಳಲ್ಲಿ ಈ ಪಶ್ಚಿಮ ಜಾಗರ ಪೂಜೆ ವಿಶೇಷವಾಗಿದೆ.