ಹೊಸದಿಗಂತ ವರದಿ, ಉಡುಪಿ:
ಉಡುಪಿ ಸಿಟಿ ನಿಲ್ದಾಣದಲ್ಲಿ ವೈದ್ಯೆಯೊಬ್ಬರು ತನ್ನ ಪರವಾನಿಗೆ ನೀಡಿ ವೈದ್ಯಕೀಯ ಪದವಿ ಹೊಂದಿಲ್ಲದ ವ್ಯಕ್ತಿ ಮೂಲಕ ನಡೆಸುತ್ತಿದ್ದ ಡೆಂಟಲ್ ಕ್ಲಿನಿಕ್ ಲ್ಯಾಬ್ ಅನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿ ನಿಯಮ 2007ರ ಅಡಿಯಲ್ಲಿ ಉಡುಪಿ ಸಿಟಿ ನಿಲ್ದಾಣದಲ್ಲಿ ವೈದ್ಯೆಯೊಬ್ಬರಿಗೆ ಡೆಂಟಲ್ ಕ್ಲಿನಿಕ್ ಲ್ಯಾಬ್ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಅವರು ಕ್ಲಿನಿಕ್ ನಡೆಸುವ ಬದಲು ವೈದ್ಯಕೀಯ ಪದವಿ ಹೊಂದಿಲ್ಲದ ರಾಧಾ ಗೋವಿಂದ ಭಂಡಾರಿ ಎನ್ನುವವರಿಗೆ ಕ್ಲಿನಿಕ್ ನಿರ್ವಹಿಸಲು ಅವಕಾಶ ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಮೇಲೆ ದಾಳಿ ನಡೆಸಿ ಸೀಲ್ ಮಾಡಿದ್ದಾರೆ.