ಉಡುಪಿ: ನಗರದಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿ, ಉಚಿತವಾಗಿ ನಿರ್ವಹಿಸಲು ಪ್ರತಿಯಾಗಿ ಬಿಆರ್ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ನಿರ್ಮಿಸುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೀಲನಕ್ಷೆ ಕಾನೂನುಬದ್ಧವಾಗಿದ್ದರೆ ಅದಕ್ಕೆ ಒಂದೇ ದಿನದಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ನೀಡಲಾಗುವುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ವಿಷಯದಲ್ಲಿ ಬಿ.ಆರ್. ಶೆಟ್ಟಿ ಅವರ ಯಾವುದೇ ಒತ್ತಡ ಮತ್ತು ಬ್ಲಾಕ್ಮೇಲ್ ತಂತ್ರಕ್ಕೆ ಸರ್ಕಾರ ಮಣಿಯಬಾರದು ಎಂದು ತಿಳಿಸಿದರು.
ಎಂಒಯು ಆಗಿ 3 ವರ್ಷವಾದರೂ ಬಿಎಸ್ಆರ್ ಸಂಸ್ಥೆಗೆ ರಾಜ್ಯ ಸರ್ಕಾರದೊಂದಿಗೆ ಡೆಫಿನೆಟಿವ್ ಅಗ್ರಿಮೆಂಟ್ಗೆ ಸಹಿ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ಜಿಲ್ಲಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳು ಕಾರಣವಲ್ಲ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಸೂಚಿತವಾಗಿ ಬರುವ ರೋಗಿಗಳಿಗೆ ಹೊಸ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂಬ ಸರಕಾರದ ಷರತ್ತಿಗೆ ಸಂಸ್ಥೆ ಒಪ್ಪಿಗೆ ಸೂಚಿಸದಿರುವುದೇ ಒಪ್ಪಂದ ನೆನೆಗುದಿಗೆ ಬೀಳಲು ಕಾರಣವಾಗಿದೆ ಎಂದು ಶಾಸಕರು ತಿಳಿಸಿದರು.
ಬಿಆರ್ಎಸ್ ಸಂಸ್ಥೆ ಮೈತ್ರಿ ಸರಕಾರದ ಅವಧಿಯಲ್ಲಿ, ಸರಕಾರದ ಜೊತೆ ಅಂತಿಮ ಒಪ್ಪಂದ ಆಗುವ ಮೊದಲೇ ರಾತ್ರೋರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು, ಹಳೆ ಆಸ್ಪತ್ರೆ ಕಟ್ಟಡವನ್ನು ಕೆಡವಿ, ಮೂರು ಅಂತಸ್ತುಗಳಷ್ಟು ಆಳಕ್ಕೆ ಗುಂಡಿ ತೋಡಿದ್ದಾರೆ. ಈಗಾಗಲೇ ಕೆಲವು ನಿರ್ಮಾಣ ಆರಂಭಿಸಿದ್ದಾರೆ. ಇದು ಜವಾಬ್ದಾರಿಯುತ ನಡೆಯಲ್ಲ ಎಂದು ಟೀಕಿಸಿದರು.
ನಗರದಲ್ಲಿ ನಿರ್ಮಿಸುವ ಯಾವುದೇ ಕಟ್ಟಡಕ್ಕೆ ಮೂರು ನೆಲ ಅಂತಸ್ತಿನ ಕಟ್ಟಡ ನಿರ್ಮಾಣ ಕಾನೂನುಬಾಹಿರವಾಗಿದೆ. ಸಿಝಡ್ಆರ್ ನಿಯಮ ಪ್ರಕಾರ ಬಹುಮಹಡಿ ಕಟ್ಟಡಗಳಿಗೆ ಕೇವಲ 2 ನೆಲ ಅಂತಸ್ತಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಭಾಗದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿಯನ್ನು ನೀಡಲಾಗಿಲ್ಲ. ಬಿಆರ್ಎಸ್ ಸಂಸ್ಥೆ ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿದರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಹಿಂದಿನ ಮಹಿಳಾ ಸರಕಾರಿ ಆಸ್ಪತ್ರೆ ಸುಸಜ್ಜಿತವಾಗಿತ್ತು. ಜನರು ಬಹಳಷ್ಟು ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಅದನ್ನು ಕೆಡವಿ ಹಾಕಲಾಗಿದೆ. ಸರಕಾರಕ್ಕೆ ಆಸ್ಪತ್ರೆಯನ್ನು ವಾಪಸ್ ಬಿಟ್ಟು ಕೊಡುವುದೇ ಆದರೆ ಹಿಂದಿನಂತೆ ಮಣ್ಣು ತುಂಬಿಸಿ, ಹಿಂದಿನ ರೀತಿಯಲ್ಲಿ ಕಟ್ಟಡವನ್ನು ಪುನರ್ ನಿರ್ಮಿಸಿ ಕೊಡಲಿ, ನಾವು ವಾಪಸ್ ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದ ಶಾಸಕ ಭಟ್, ಈಗಿನ 200 ಹಾಸಿಗೆಗಳ ಆಸ್ಪತ್ರೆಯನ್ನು ಸರಕಾರ ನಿರ್ವಹಿಸುವುದು ಕಷ್ಟ ಸಾಧ್ಯ. ಅಲ್ಲಿನ ತಿಂಗಳ ವಿದ್ಯುತ್ ಬಿಲ್ ಸುಮಾರು 18 ಲಕ್ಷ ರೂ. ಆಗಿದೆ ಎಂದು ತಿಳಿಸಿದರು.