Wednesday, August 10, 2022

Latest Posts

ಉಡುಪಿ| ಸೋಂಕಿತನೊಬ್ಬನಿಗೆ ಮುಂಬೈ – ಉಡುಪಿ ಎರಡೂ ಕಡೆ ಕೋವಿಡ್ ಪಾಸಿಟಿವ್

ಉಡುಪಿ: ಮುಂಬೈನಲ್ಲಿ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗೆ ಉಡುಪಿ ಜಿಲ್ಲೆಯಲ್ಲಿಯೂ ಕೊರೋನಾ ಪಾಸಿಟಿವ್ ಆಗಿದೆ. ಆತನಿಂದ ಬಾಲಕ, ಗರ್ಭಿಣಿಗೂ ಸೋಂಕು ಹರಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಪಾಸಿಟಿವ್ ವರದಿ ಬಂದ ರೋಗಿಗಳಲ್ಲಿ 38ರ ಹರೆಯದ ವ್ಯಕ್ತಿ (ರೋಗಿ ಸಂಖ್ಯೆ 1289)ಗೆ 8ರ ಹರೆಯದ ಬಾಲಕ (ರೋಗಿ ಸಂಖ್ಯೆ 1288) ಅಣ್ಣನ ಮಗನಾಗಿದ್ದಾನೆ. ಮುಂಬೈನಿಂದಲೇ ಬಂದ 24ರ ಮಹಿಳೆ (ರೋಗಿ ಸಂಖ್ಯೆ 1287)ಗೆ ಹಾಗೂ 24ರ ಯುವಕ (ರೋಗಿ ಸಂಖ್ಯೆ 1286)ನಿಗೂ ಸೋಂಕು ತಟ್ಟಿದೆ.
ಪ್ರಾಥಮಿಕ ಸಂಪರ್ಕದಲ್ಲಿ 66 ಜನ
ರೋಗಿ ಸಂಖ್ಯೆ 1287, 1288 ಮತ್ತು 1289 ಸೋಂಕಿತರೆಲ್ಲರೂ ಮೇ 13ರಂದು ಮುಂಬೈನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಈ ಪೈಕಿ 38 ಮತ್ತು 8ರ ಹರೆಯದ ಇಬ್ಬರಿಗೆ ಒಟ್ಟು 33 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ 11 ಜನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಈ ಮೂವರು ಕೊಲ್ಲೂರಿನಲ್ಲಿ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಟ್ಟಿದ್ದರು. ಮತ್ತೋರ್ವ ಸೋಂಕಿತ 24 ಹರೆಯದ ಯುವಕ ಮೇ 11ರಂದು ಮುಂಬೈನಿಂದ ಬಂದಿದ್ದು, ಕಿರಿಮಂಜೇಶ್ವರದಲ್ಲಿ ಸಾಂಸ್ಥಿಕ ದಿಗ್ಬಂಧನದಲ್ಲಿದ್ದ. ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು 22 ಮಂದಿ ಇದ್ದಾರೆ. ಸೋಂಕಿತ ಸಂಪರ್ಕಕ್ಕೆ ಬಂದ 66 ಮಂದಿಯನ್ನು ಪ್ರತ್ಯೇಕಿಸಿ, ನಿಗಾ ಇರಿಸಲಾಗಿದೆ.
ಮುಂಬೈ ಪರೀಕ್ಷಾ ವರದಿಗೂ ಮುನ್ನ ಹೊರಟಿದ್ದ
ಸೋಂಕಿತ (ರೋಗಿ ಸಂಖ್ಯೆ 1289) ಮುಂಬೈನಲ್ಲಿಯೇ ಕೋವಿಡ್-19 ಪರೀಕ್ಷೆಗೊಳಪಟ್ಟಿದ್ದ, ವರದಿ ಬರುವವರೆಗೆ ಮುಂಬೈ ನಗರವನ್ನು ತೊರೆಯದಂತೆ ಆತನಿಗೆ ಸೂಚಿಸಲಾಗಿತ್ತು. ಆದರೆ ಪರೀಕ್ಷಾ ವರದಿ ಬರುವ ಮೊದಲೇ ಆತ ಮುಂಬೈನಿಂದ ಉಡುಪಿಗೆ ಬಂದಿದ್ದ. ಬಳಿಕ ದಿಗ್ಬಂಧನದಲ್ಲಿದ್ದಾಗ ತನಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಮುಂಬೈನಿಂದ ದೂರವಾಣಿ ಕರೆ ಬಂದಿದೆ ಎಂದು ಆತ ಹೇಳಿದ್ದ. ಆದ್ದರಿಂದ ಮೇ 16ರಂದು ಆತನ ಗಂಟಲ ದ್ರವದ ಮಾದರಿ ಪಡೆದು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಕೋವಿಡ್ ಪಾಸಿಟಿವ್ ಆಗಿದೆ.
ಮುಂಜಾಗ್ರತಾ ಕ್ರಮವಾಗಿ ಶನಿವಾರವೇ ಆತನ ಕುಟುಂಬದ ಐದು ಮಂದಿಯನ್ನು ಕುಂದಾಪುರದಲ್ಲಿ ಹಾಗೂ ಉಳಿದ 27 ಮಂದಿಯನ್ನು ಉಡುಪಿಯಲ್ಲಿ ಆಸ್ಪತ್ರೆ ಪ್ರತ್ಯೇಕಿತ ವಾರ್ಡ್‌ಗಳಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಅದೇ ದಿನ ಆತನ ಸಂಪರ್ಕದಲ್ಲಿದ್ದ ಎಲ್ಲರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss