ಉಡುಪಿ: ಸೋಂಕಿತನ ಸಂಪರ್ಕ: 93 ಮಂದಿಗೆ ಗೃಹಬಂಧನ

0
106

ಉಡುಪಿ: ನಗರದಲ್ಲಿ ಪತ್ತೆಯಾದ ಕೊರೋನಾ ವೈರಸ್ ಸೋಂಕಿತನ ನೇರ ಸಂಪರ್ಕಕ್ಕೆ 93 ಮಂದಿ ಬಂದಿದ್ದು, ಎಲ್ಲರೂ ಗೃಹ ದಿಗ್ಬಂಧನದಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಮೂಲತಃ ದಾವಣಗೆರೆ ಜಿಯವರಾದ ಸೋಂಕಿತ ವ್ಯಕ್ತಿ ಮಣಿಪಾಲದಲ್ಲಿ ಲ್ಯಾಬ್ ಟೆಕ್ನಿಷನ್ ಆಗಿದ್ದಾರೆ. ಮಾ.18ರಂದು ದುಬೈನಿಂದ ಮಂಗಳೂರಿಗೆ ಬಂದು ಇಳಿದು, ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಮಣಿಪಾಲದಲ್ಲಿರುವ ಮನೆಗೆ ಬಂದಿದ್ದೇನೆ. ಆನಂತರ ನಾನು ಎಲ್ಲೂ ಹೋಗಿಲ್ಲ, ಶೀತ, ಕೆಮ್ಮು, ಜ್ವರ ಶುರುವಾದ ಬಳಿಕ ಮಾ.23ರಂದು ನೇರವಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗಿ ಸೋಂಕಿತ ವ್ಯಕ್ತಿ ಹೇಳಿಕೊಂಡಿದ್ದಾರೆ.

ಉಡುಪಿ ಡಿ.ಎಚ್‌.ಒ, ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು ಸೋಂಕಿತ ವ್ಯಕ್ತಿಯ ಸಂಚಾರ ವಿವರದ ಬಗ್ಗೆ ತರತರನಾಗಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಂಕಿತ ಮಾತ್ರ ಇಷ್ಟನ್ನೇ ಹೇಳಿದ್ದರಿಂದ ಜಿಲ್ಲಾಡಳಿತ ಸೋಂಕಿತನ ಫೋನ್ ನೆಟ್‌ ವರ್ಕ್ ಟ್ರ್ಯಾಕ್ ಮಾಡಲು ನಿರ್ಧರಿಸಿತ್ತು. ಈ ವೇಳೆಯೂ ಫೋನ್ ನೆಟ್‌ ವರ್ಕ್ ಮನೆ ಮತ್ತು ಆಸ್ಪತ್ರೆಯನ್ನು ಮಾತ್ರ ತೋರಿಸಿದೆ ಎಂದು ಡಿ.ಎಚ್‌.ಒ ತಿಳಿಸಿದ್ದಾರೆ.

ಉಡುಪಿಯ ಸೋಂಕಿತ ವ್ಯಕ್ತಿ ಬಂದ ವಿಮಾನದಲ್ಲಿ ಜಿಲ್ಲೆಯ 89 ಮಂದಿ ಇದ್ದರು. ಸೋಂಕಿತ ಟ್ಯಾಕ್ಸಿಯಲ್ಲಿ ಉಡುಪಿಗೆ ಬಂದಿದ್ದು, ಮನೆ ಸೇರಿದ ಬಳಿಕ ಹೊರಗೆ ಹೋಗದೇ ಆನ್‌ಲೈನ್ ಮೂಲಕ ಆಹಾರ ತರಿಸಿಕೊಂಡು ಊಟ ಮಾಡುತ್ತಿದ್ದರು. ವಿಮಾನದಲ್ಲಿದ್ದ ಉಡುಪಿ ಜಿಲ್ಲೆಯವರು ಸಹಿತ ಸೋಂಕಿತ ವ್ಯಕ್ತಿಗೆ ಜಿಲ್ಲೆಯಲ್ಲಿ ಒಟ್ಟು 93 ಮಂದಿ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಇವೆಲ್ಲರೂ ಗೃಹ ದಿಗ್ಬಂಧನದಲ್ಲಿದ್ದಾರೆ. ಸೋಂಕಿತ ವ್ಯಕ್ತಿಯು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಎಚ್ಚರಿಕೆ: ಕೋವಿಡ್ -19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದೇಶದಿಂದ ಬಂದವರಿಗೆ ಗೃಹ ದಿಗ್ಬಂಧನ ವಿಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಅಂತಹವರ ಪಾಸ್‌ ಪೋರ್ಟ್ ಮುಟ್ಟುಗೋಲು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿ.ಆರ್‌.ಪಿ.ಸಿ ಸೆಕ್ಷನ್ 144(3)ರಂತೆ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ. ವಿದೇಶದಿಂದ ಹೊರರಾಜ್ಯಗಳಿಂದ ಬಂದಿರುವ ಹಾಗೂ ಜಿಲ್ಲೆಯಲ್ಲಿ ಸೋಂಕು ತಗಲಿರುವ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಚಿಕಿತ್ಸೆಗಾಗಿ ಗೃಹ ದಿಗ್ಬಂಧನನಲ್ಲೇ ಇರುವಂತೆ ಹಾಗೂ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಕನಿಷ್ಠ 3 ಬಾರಿ ಅವರ ಮನೆಗಳಿಗೆ ಭೇಟಿ ನೀಡುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಅಲ್ಲದೇ ಗೃಹ ದಿಗ್ಬಂಧನ ಆದೇಶಗಳನ್ನು ಪಾಲಿಸದೇ ಇರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲು ಅಧಿಕಾರವನ್ನು ಈಗಾಗಲೇ ಪ್ರತ್ಯಾಯೋಜಿಸಲಾಗಿದೆ.

ಆದರೆ ಗೃಹ ದಿಗ್ಬಂಧನದಲ್ಲಿ ಇರಬೇಕಾದ ಸಾಕಷ್ಟು ಜನರು ನಿಯಮಗಳನ್ನು ಪಾಲಿಸದೇ ಹೊರಗಡೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ದೂರುಗಳು ಬಂದಿವೆ. ವಿದೇಶದಿಂದ ಬಂದಿರುವವರು ಮತ್ತು ಗೃಹ ದಿಗ್ಬಂಧನದಲ್ಲಿರಬೇಕಾದ ಎಲ್ಲ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಮನೆಯಲ್ಲಿಯೇ ಇರುವಂತೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿ ಯಾರಾದರೂ ಹೊರಗಡೆ ಬಂದರೆ ಅವರ ಮೇಲೆ ಕ್ರಮಿನಲ್ ಪ್ರಕರಣ ದಾಖಲಿಸಲಾಗುವುದು. ಅಂತಹವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿ ಮುಂದಿನ ವಿದೇಶ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here