ಉಡುಪಿ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಕೋವಿಡ್ ಸೋಂಕಿತ (ರೋಗಿ ಸಂಖ್ಯೆ 1093) ವ್ಯಕ್ತಿಗೆ ಒಟ್ಟು 57 ಮಂದಿ ಪ್ರಾಥಮಿಕ ಹಾಗೂ 38 ಮಂದಿ ದ್ವಿತೀಯ ಹಂತದ ಸಂರ್ಪಕಕ್ಕೆ ಬಂದಿದ್ದರು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.
ಮುಂಬೈಯಿಂದ ಕುಂದಾಪುರಕ್ಕೆ ಪ್ರಯಾಣಿಸಿ ಸರಕಾರಿ ದಿಗ್ಬಂಧನದಲ್ಲಿದ್ದ 54ರ ಹರೆಯದ ವ್ಯಕ್ತಿ ಗುರುವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ಸಂಜೆ ವ್ಯಕ್ತಿಗೆ ಹೃದಯಾಘಾತವಾಗುತ್ತಿದ್ದಂತೆ ಅವರನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅವರನ್ನು ವೈದ್ಯರು ಪರೀಕ್ಷಿಸಿ, ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಯ ನಂತರ ಅವರು ತೀವ್ರ ತರಹದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತಪಟ್ಟಿರುವ ವ್ಯಕ್ತಿಯು ಮಹಾರಾಷ್ಟ್ರದ ಮುಂಬೈನಿಂದ ಬಂದಿರುವುದರಿಂದ ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ನಿರ್ಧರಿಸಿದ್ದೆವು. ಅದರಂತೆ ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಪರೀಕ್ಷೆ ನಡೆಸಲಾಗಿದೆ. ಇದೀಗ ಅವರ ವರದಿ ಪಾಸಿಟಿವ್ ಬಂದಿದೆ. ಆದ್ದರಿಂದ ಮೃತಪಟ್ಟ ಸೋಂಕಿತ ವ್ಯಕ್ತಿಯ ಜೊತೆ ಪ್ರಯಾಣಿಸಿದ 5ಜನರನ್ನು ದಿಗ್ಬಂಧನದಲ್ಲಿರಿಸಲಾಗಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಕೆಎಂಸಿ ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ದಿಗ್ಬಂಧನಕ್ಕೊಳಪಡಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದ ಸೋಂಕಿತ ವ್ಯಕ್ತಿಗೆ ಕೆಎಂಸಿಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸರಕಾರದ ಮಾರ್ಗಸೂಚಿಯಂತೆ ವೈಯಕ್ತಿಕ ಸುರಕ್ಷತಾ ಕ್ರಮಗಳೊಂದಿಗೆ ಚಿಕಿತ್ಸೆ ನೀಡಿದ್ದಾರೆ. ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವೈಯಕ್ತಿಕ ಸುರಕ್ಷತಾ ಪರಿಕರ(ಪಿಪಿಇ)ಗಳನ್ನು ಧರಿಸಿಯೇ ಚಿಕಿತ್ಸೆ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ.
ಕುಂದಾಪುರದಲ್ಲಿ ಸಭಾಂಗಣವೊಂದರಲ್ಲಿ ಸಾಂಸ್ಥಿಕ ದಿಗ್ಬಂಧನದಲ್ಲಿ ಇರಿಸಲಾಗಿದ್ದರಿಂದ ಮರಣ ಹೊಂದಿದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 57 ಮಂದಿಯನ್ನು ಗುರುತಿಸಲಾಗಿದೆ. ಅಲ್ಲದೇ 38 ಮಂದಿ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರು ಎಂದು ಗುರುತಿಸಲಾಗಿದೆ ಎಂದು ತಿಳಿಸಿದ ಡಿಸಿ, ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಕೋವಿಡ್ ಶಿಷ್ಟಾಚಾರದಂತೆ ನಡೆಸಲು ಸೂಚನೆ ನೀಡಲಾಗಿದೆ. ಅದರಂತೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.