Friday, August 12, 2022

Latest Posts

ಉಡುಪಿ| ಸೋಮವಾರ ಒಬ್ಬರಿಗೆ ಕೋವಿಡ್ ಸೋಂಕು ದೃಢ: ಇನ್ನೂ 542 ಜನರ ವರದಿ ಬಾಕಿ

ಉಡುಪಿ: ಜಿಲ್ಲೆಯಿಂದ ಕೋವಿಡ್-19 ಸೋಂಕಿನ ಪರೀಕ್ಷೆ ನಡೆದು ಸೋಮವಾರ ದೊರೆತ 68 ವರದಿಗಳ ಪೈಕಿ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಪ್ರಯಾಣ ಮಾಡಿದ ಗರ್ಭಿಣಿ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಉಳಿದ 67 ಮಂದಿಗೆ ಸೋಂಕು ಇಲ್ಲದಿರುವುದು ಖಚಿತಗೊಂಡಿದೆ. ಜಿಲ್ಲೆಯಲ್ಲಿ ಇದುವರೆಗೆ 2470 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದ್ದು, ಇದರಲ್ಲಿ ಒಟ್ಟು 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಏಳು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮೂವರು ಗುಣಮುಖರಾಗಿದ್ದಾರೆ. ಒಬ್ಬರು ಮರಣ ಹೊಂದಿದ್ದಾರೆ. ಒಟ್ಟು 1918 ಮಂದಿಯ ವರದಿ ನೆಗೆಟಿವ್ ಬಂದಿದೆ, 542 ಜನರ ವರದಿ ಬರಲು ಬಾಕಿ ಇದೆ.

269 ಜನರ ಗಂಟಲ ದ್ರವ ಮಾದರಿ ಸಂಗ್ರಹ: ಸೋಮವಾರ 269 ಮಂದಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಈ ಪೈಕಿ 240 ಮಂದಿ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದವರು, 10 ಮಂದಿ ತೀವ್ರ ಉಸಿರಾಟದ ತೊಂದರೆ ಇರುವವರು ಮತ್ತು ನಾಲ್ವರು ಮಂದಿ ಶೀತಜ್ವರದ ಬಾಧೆಗೊಳಗಾದವರು. ಉಳಿದ 15 ಜನ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಡಿಎಚ್‌ಒ ವಿವರಿಸಿದ್ದಾರೆ.

ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿರುವ ಪ್ರತ್ಯೇಕಿತ ವಾರ್ಡ್‌ಗಳಿಗೆ ಮತ್ತೆ ಹೊಸದಾಗಿ 15 ಮಂದಿ ದಾಖಲಾಗಿದ್ದಾರೆ. ಐವರು ತೀವ್ರ ಉಸಿರಾಟದ ತೊಂದರೆಯಿಂದ ಬಂದರೆ, ನಾಲ್ವರು ಶೀತಜ್ವರ ಬಾಧಿತರಾಗಿ ಆಸ್ಪತ್ರೆಗೆ ಬಂದಿದ್ದಾರೆ. ಉಳಿದ ಆರು ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಸೋಮವಾರ 17 ಮಂದಿ ಪ್ರತ್ಯೇಕಿತ ವಾರ್ಡ್‌ಗಳ ನಿಗಾದಿಂದ ಬಿಡುಗಡೆಯಾಗಿದ್ದು, 82 ಮಂದಿ ಇನ್ನೂ ನಿಗಾದಲ್ಲಿದ್ದಾರೆ. ಆಸ್ಪತ್ರೆ ದಿಗ್ಬಂಧನದಲ್ಲಿ 47 ಮಂದಿ ಇದ್ದಾರೆ.

ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆ ಇರುವವರು, ಪ್ರಯಾಣಿಕರು ಮತ್ತು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರು 32 ಮಂದಿ ಹೊಸದಾಗಿ ಸೇರಿ ಒಟ್ಟು 4633 ಮಂದಿ ನಿಗಾಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಹೊಸದಾಗಿ 45 ಮಂದಿ ಸೇರಿ ಒಟ್ಟು 3251 ಮಂದಿ 28 ದಿನಗಳ ಗೃಹ ದಿಗ್ಬಂಧನ ಅವಧಿ ಪೂರೈಸಿದ್ದಾರೆ. 14 ದಿನಗಳ ಗೃಹ ದಿಗ್ಬಂಧನವನ್ನು ಹೊಸದಾಗಿ 144 ಮಂದಿ ಸೇರಿ ಒಟ್ಟು 3993 ಜನ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ 511 ಮಂದಿ ಗೃಹ ದಿಗ್ಬಂಧನದಲ್ಲಿದ್ದಾರೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss