ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಜೋಸ್ ಅಲುಕ್ಕಾಸ್ ಆಭರಣ ಮಳಿಗೆ ವತಿಯಿಂದ ಸಾರ್ವಜನಿಕರ ಸ್ವಾಸ್ಥ್ಯ ಕ್ಷೇಮಾರ್ಥ, ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಯಾನಿಟೈಸರ್ ದ್ರಾವಣ ಕೇಂದ್ರವನ್ನು ನಗರದ ಮಾರುತಿ ವೀಥಿಕಾ ಸಮೀಪ ಸ್ಥಾಪಿಸಲಾಗಿದೆ.
ಶನಿವಾರ ಕೇಂದ್ರವನ್ನು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉದ್ಘಾಟಿಸಿ, ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸ್ಥಾಪಿಸಿರುವ ಸ್ಯಾನಿಟೈಸರ್ ಕೇಂದ್ರವು ಈ ತುರ್ತು ಸಮಯದಲ್ಲಿ ಅತಿ ಅಗತ್ಯವಾಗಿದೆ ಎಂದರು.
ದಾನಿಗಳ ಸಹಕಾರ ದೊರೆತರೆ, ನಗರದಲ್ಲಿ ಅತಿಹೆಚ್ಚು ಜನ ಸಂಚಾರ ಇರುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಸ್ಯಾನಿಟೈಸರ್ ದ್ರಾವಣ ಕೇಂದ್ರ ಸ್ಥಾಪಿಸಲು ಸಂಕಲ್ಪಿಸಿದ್ದೇವೆ ಎಂದು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಹೇಳಿದರು.
ನಾಗರಿಕ ಸಮಿತಿಯ ಸ್ಥಾಪಕ ಅಧ್ಯಕ್ಷ ಉದ್ಯಮಿ ಪಿ. ಸುದರ್ಶನ್ ಕಾಮತ್ ಯಂತ್ರ, ಪರಿಕರಗಳನ್ನು ಉಚಿತವಾಗಿ ಒದಗಿಸಿದರು.
ಈ ವೇಳೆ ಜೋಸ್ ಅಲುಕ್ಕಾಸ್ ಆಭರಣ ಮಳಿಗೆಯ ಗೋಪಾಲ್, ಸಮಿತಿಯ ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಅಭಿಜಿತ್ ಕಾಮತ್, ರವಿಚಂದ್ರನ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.