ಉಡುಪಿ: ಜಿಲ್ಲೆಗೆ ಹೊರ ರಾಜ್ಯದಿಂದ 7,872 ಮಂದಿ ಬಂದಿದ್ದಾರೆ. ಹೊರ ರಾಜ್ಯದಿಂದ ಬರುವವರಲ್ಲಿ ಶೇ.10 ಮಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.
ಕುಂದಾಪುರ ತಾ.ಪಂ.ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-19 ಪ್ರಸರಣಾ ತಡೆ ಕುರಿತಾದ ಸಭೆಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಗೆ ಕೆಂಪು ವಲಯದ ಮಹಾರಾಷ್ಟ್ರದಿಂದ ಬಂದ 6,800 ಜನರಿದ್ದರೆ, ತೆಲಂಗಾಣದಿಂದ 450 ಮಂದಿ ಬಂದಿದ್ದಾರೆ ಎಂದು ತಿಳಿಸಿದರು.
ಇದಕ್ಕಾಗಿ ಉಡುಪಿ, ಕುಂದಾಪುರ, ಉದ್ಯಾವರ ಹಾಗೂ ಕಾರ್ಕಳದಲ್ಲಿ 500 ಹಾಸಿಗೆಗಳಿಗೆ ಅವಕಾಶವಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಿಗಾಗಿ ಪ್ರತ್ಯೇಕ ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 12ತಜ್ಞ ವೈದ್ಯರಿರುವ ಸಮಿತಿ ರಚಿಸಲಾಗಿದ್ದು, ಕಾಲ ಕಾಲಕ್ಕೆ ಅವರಿಂದ ಸಲಹೆ ಪಡೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಪ್ರಸ್ತುತ ಮಂಗಳೂರಿನ ವೆನ್ಲಾಕ್, ಯೆನಪೋಯಾ ವೈದ್ಯಕೀಯ ಕಾಲೇಜು ಹಾಗೂ ಮಣಿಪಾಲದ ಕೆಎಂಸಿಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಯುತ್ತಿದೆ. ಪ್ರತಿ ದಿನ ಗರಿಷ್ಠ 400 ಮಂದಿಯ ಪರೀಕ್ಷಾ ವರದಿಯನ್ನು ನಿರೀಕ್ಷೆ ಮಾಡಲಾಗಿದೆ. ಜಿಲ್ಲೆಯ ಬೇಡಿಕೆಗೆ ಪೂರಕವಾಗಿ 2 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ ಅವರು ವಿವರಿಸಿದರು.
ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ಕೆ.ರಾಜು, ಎಎಸ್ಪಿ ಹರಿರಾಂ ಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮೊದಲಾದವರಿದ್ದರು.