Saturday, August 13, 2022

Latest Posts

ಉಡುಪಿ| 13 ಸಾವಿರಕ್ಕೂ ಅಧಿಕ ಕೊರೋನಾ ಮಾದರಿಗಳನ್ನು ಪರೀಕ್ಷೆ ನಡೆಸಿದ ವೆನ್ಲಾಕ್ ಕೋವಿಡ್ ಲ್ಯಾಬ್

ಉಡುಪಿ: ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ ಮಂಜೂರಾಗಿ ಮೊತ್ತಮೊದಲು ಆರಂಭವಾದ ಸರಕಾರಿ ಕೋವಿಡ್ ಪ್ರಯೋಗಾಲಯವಾಗಿರುವ ಮಂಗಳೂರಿನ ವೆನ್ಲಾಕ್ ಕೋವಿಡ್ ಲ್ಯಾಬ್‌ನಲ್ಲಿ ಕಳೆದ 52 ದಿನಗಳಲ್ಲಿ ಒಟ್ಟು 13ಸಾವಿರಕ್ಕೂ ಅಧಿಕ ಮಾದರಿಗಳ ಪರೀಕ್ಷೆ ನಡೆದಿದೆ.

ಐ.ಸಿ.ಎಂ.ಆರ್.ನ ಅನುಮತಿ ಸಿಕ್ಕಿದ ಕೇವಲ ಐದು ದಿನಗಳ ಅವಧಿಯಲ್ಲಿ ಪ್ರಾರಂಭವಾದ ವೆನ್ಲಾಕ್ ಕೋವಿಡ್ ಲ್ಯಾಬ್‌ನಲ್ಲಿ 52 ದಿನಗಳಲ್ಲಿ 13,713 ಗಂಟಲ ದ್ರವಗಳ ಪರೀಕ್ಷೆ ನಡೆಸಲಾಗಿದೆ.  ಉಡುಪಿ ಜಿಲ್ಲೆಯಿಂದ 2945, ದ.ಕ. ಜಿಲ್ಲೆಯ 6920 ಮತ್ತು ಉ.ಕ. ಜಿಲ್ಲೆಯಿಂದ ಬಂದ 3848 ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ 259 ಮಾದರಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಒಂದೊಮ್ಮೆ ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸಿದ್ದ ವೆನ್ಲಾಕ್ ಕೋವಿಡ್ ಲ್ಯಾಬ್‌ನಲ್ಲಿ ಭಾನುವಾರ ಯಾವುದೇ ಮಾದರಿ ಪರೀಕ್ಷೆ ಬಾಕಿ ಉಳಿದಿಲ್ಲ. ಎಲ್ಲ ಮಾದರಿಗಳನ್ನು ಪರೀಕ್ಷೆ ನಡೆಸಿ ವರದಿಗಳನ್ನು ಆಯಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಪ್ರಯೋಗಾಲದ ಮೇಲ್ವಿಚಾರಕರಾಗಿರುವ ರೋಗಶಾಸಜ್ಞ ಡಾ. ಶರತ್‌ಕುಮಾರ್ ರಾವ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿ ವೆನ್ಲಾಕ್ ಲ್ಯಾಬ್ ತಪ್ಪು ವರದಿ ನೀಡಿದೆ ಎಂಬ ಗೊಂದಲ ಉಂಟಾಗಿತ್ತು. ಆದರೆ ನಮ್ಮ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿ, ಪಾಸಿಟಿವ್ ಬಂದ ಮಾದರಿಗಳನ್ನೇ ಮಂಗಳೂರಿನ ಮೂರು ಖಾಸಗಿ ಲ್ಯಾಬ್‌ಗಳ ಪ್ರಾಯೋಗಿಕ ಪರೀಕ್ಷೆಗೆ ನೀಡಿದ್ದೇವೆ. ಅಲ್ಲಿ ಕೂಡ ಪಾಸಿಟಿವ್ ಬಂದಿವೆ. ಒಂದೆರಡು ದಿನಗಳ ಅಂತರದಲ್ಲಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬರಬಹುದು. ನಮಗೆ ಮಾದರಿ ಬಂದಂತೆ ಪರೀಕ್ಷೆ ನಡೆಸುತ್ತೇವೆ, ಒಂದು ವೇಳೆ ವರದಿ ತಪ್ಪಾಗಿದೆ ಎಂದಾದರೆ ಗಂಟಲ ದ್ರವ ಮಾದರಿ ತೆಗೆಯುವಾಗ ವ್ಯತ್ಯಾಸ ಆಗಿರುವ ಸಾಧ್ಯತೆ ಇದೆ ಎಂದು ಡಾ. ಶರತ್ ಕುಮಾರ್ ರಾವ್ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss