Sunday, June 26, 2022

Latest Posts

ಉಡುಪಿ| 154 ಗ್ರಾ.ಪಂ.ಗಳಿಗೆ ಎರಡು ಹಂತದಲ್ಲಿ ಚುನಾವಣೆ: ಇಂದಿನಿಂದಲೇ ನೀತಿ ಸಂಹಿತೆ ಜಾರಿ

ಹೊಸ ದಿಗಂತ ವರದಿ ಉಡುಪಿ:

ಜಿಲ್ಲೆಯಲ್ಲಿ 154 ಗ್ರಾಮ ಪಂಚಾಯತ್ ಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತದೆ. ಇಂದಿನಿಂದಲೇ ಅನ್ವಯವಾಗುವಂತೆ ಡಿಸೆಂಬರ್ 31ರವರೆಗೆ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ನಡೆಯುವ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಚುನಾವಣೆಯ ಕುರಿತು ವಿವರಗಳನ್ನು ನೀಡಿದರು.
ಮೊದಲ ಹಂತದಲ್ಲಿ ಡಿ. 22ರಂದು ಉಡುಪಿ ತಾಲೂಕಿನ 16, ಹೆಬ್ರಿ ತಾಲೂಕಿನ 9, ಬ್ರಹ್ಮಾವರ ತಾಲೂಕಿನ 27 ಮತ್ತು ಬೈಂದೂರು ತಾಲೂಕಿನ 15 ಗ್ರಾ.ಪಂ.ಗಳು ಸೇರಿ ಒಟ್ಟು 67 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಡಿ. 27ರಂದು ‌ಕುಂದಾಪುರ ತಾಲೂಕಿನ 44, ಕಾರ್ಕಳ ತಾಲೂಕಿನ 27 ಮತ್ತು ಕಾಪು ತಾಲೂಕಿನ 16 ಗ್ರಾ.ಪಂ.ಗಳು ಸೇರಿ 87 ಗ್ರಾ.ಪಂ.ಗಳಿಗೆ ಚುನಾವಣೆ ಜರಗಲಿದೆ ಎಂದರು.

7,95,681 ಮಂದಿ ಅರ್ಹ ಮತದಾರರು ಗ್ರಾ.ಪಂ. ಚುನಾವಣೆಯಲ್ಲಿ ಜಿಲ್ಲೆಯ 7,95,681 ಮಂದಿ ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಪೈಕಿ 3,82,785 ಮಂದಿ ಪುರುಷರು ಮತ್ತು 4,12,887 ಜನ ಮಹಿಳೆಯರು ಹಾಗೂ 9 ಮಂದಿ ಇತರೆ ಮತದಾರರು ಸೇರಿದ್ದಾರೆ. ಇವರಿಗೆ ಮತಚಲಾಯಿಸಲು 890 ಮತಗಟ್ಟೆಗಳು, 282 ಆಕ್ಸಿಲರಿ ಮತಗಟ್ಟೆಗಳು ಸೇರಿ ಒಟ್ಟು 1172 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಪ್ರತೀ ಮತಗಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ 1000 ಮತದಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೋವಿಡ್ ಸೋಂಕಿತರಿಗೆ ಮತದಾನ ಅವಧಿಯ ಕೊನೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿಸಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಜಿ.ಪಂ. ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss