ಉಡುಪಿ: ಕೋವಿಡ್ ಪರೀಕ್ಷೆಯ ಎರಡನೇ ವರದಿ ಬಂದ ಬಳಿಕವಷ್ಟೇ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಗರ್ಭಿಣಿಯರು, ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಅಸ್ವಸ್ಥತೆ ಹೊಂದಿರುವವರನ್ನು ಮನೆಗೆ ಬಿಡಲಾಗುತ್ತದೆ. ಅಲ್ಲಿ ಗೃಹ ದಿಗ್ಬಂಧನಕ್ಕೆ ಅನುಮತಿಸಲಾಗುತ್ತದೆ.
ಸರಕಾರದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ನಾಲ್ಕು ವರ್ಗದ ಜನರಿಗೆ ಗೃಹ ದಿಗ್ಬಂಧನಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಿಕರು ಬಂದ ನಂತರ ಐದನೇ ದಿನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿ, ಅವರಲ್ಲಿ ಕೋವಿಡ್-19 ಸೋಂಕು ಇಲ್ಲದಿರುವುದು ಖಚಿತವಾದ ಬಳಿಕ ಗೃಹ ದಿಗ್ಬಂಧನಕ್ಕೆ ಕಳುಹಿಸಬಹುದಾಗಿದೆ.
ದುಬೈನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 49 ಮಂದಿಯಲ್ಲಿ 19 ಜನ ಗೃಹ ದಿಗ್ಬಂಧನಕ್ಕೆ ಅರ್ಹರಿದ್ದಾರೆ. ಈ ಪೈಕಿ 13 ಜನ ಗರ್ಭಿಣಿಯರು, ಐದು ಜನ 10 ವರ್ಷ ಪ್ರಾಯದೊಳಗಿನ ಮಕ್ಕಳು ಮತ್ತು ಒಬ್ಬರು 80 ವರ್ಷ ಪ್ರಾಯದ ವೃದ್ಧರಿದ್ದಾರೆ. ದೀರ್ಘಕಾಲದ ಅಸ್ವಸ್ಥತೆ ಹೊಂದಿರುವವರು ಯಾರೂ ಇಲ್ಲ. ಈ ಪೈಕಿ ಒಂದು ವರ್ಷ ಪ್ರಾಯದ ಮಗುವಿಗೆ ಸೋಂಕು ತಗುಲಿದ್ದು, ಆ ಮಗುವನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಯ ಎಲ್ಲ ಪ್ರಯಾಣಿಕರಿಗೆ ಒಮ್ಮೆ ಕೋವಿಡ್ ಸೋಂಕಿನ ಪರೀಕ್ಷೆ ನಡೆಸಲಾಗಿದೆ. ಅವರು ಬಂದು ಮೊದಲ ದಿನವೇ ಗಂಟಲ ದ್ರವದ ಮಾದರಿ ಪರೀಕ್ಷಿಸಿದಾಗ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಗೃಹ ದಿಗ್ಬಂಧನದ ಅರ್ಹತೆ ಇರುವ ಉಳಿದ 18 ಮಂದಿಯ ಗಂಟಲ ದ್ರವದ ಮಾದರಿಯನ್ನು 5ನೇ ದಿನ ಪಡೆದು ಮತ್ತೆ ಪರೀಕ್ಷೆಗೊಳಪಡಿಸಲಾಗುತ್ತದೆ. ಆಗಲೂ ವರದಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಿ, ಅಲ್ಲಿ ಗೃಹ ದಿಗ್ಬಂಧನ ವಿಧಿಸಲಾಗುತ್ತದೆ. ಅಲ್ಲಿಯೂ ನಿತ್ಯ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ದಿನಕ್ಕೆರಡು ಬಾರಿ ಅವರ ಮನೆಗೆ ತೆರಳಿ ನಿಗಾ ಇಡಲಿದ್ದಾರೆ ಎಂದು ಡಿಎಚ್ಒ ಡಾ
ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.