ಉಡುಪಿ: ಪ್ರಸ್ತುತ ಕೋವಿಡ್-19 ಸೋಂಕಿನಿಂದಾಗಿ ವಿಶ್ವದೆಲ್ಲೆಡೆ ಜನ ಸುರಕ್ಷತೆಗಾಗಿ ತಮ್ಮ ಮನೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಿನ ಆಧುನಿಕ ತಂತ್ರಜ್ಞಾನದ ಸದ್ಭಳಕೆಯಿಂದ ತಾತ್ತ್ವಿಕ ಮನರಂಜನೆ ಕೊಡಲು ಯುಎಸ್ಎ ಯಕ್ಷಗಾನ ಕಲಾವೃಂದವು ಆನ್ಲೈನ್ ಯಕ್ಷಗಾನ ತಾಳಮದ್ದಳೆ ಆಯೋಜಿಸಿ ಯಶಸ್ವಿಯಾಗಿದೆ.
’ಪರೋಕ್ಷ’ ಯಕ್ಷಗಾನ ತಾಳಮದ್ದಳೆ ಯಕ್ಷಗಾನ ಕ್ಷೇತ್ರದಲ್ಲಿ ಮೊದಲ ಪ್ರಯತ್ನವಾಗಿದೆ. ‘ಮೇಘಾವದಾನ ಶರಸೇತುಬಂಧನ‘ ಪ್ರಸಂಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಯುಎಸ್ಎ ಯಕ್ಷಗಾನ ಕಲಾವೃಂದವು ಅಮೆರಿಕದಲ್ಲಿರುವ ಹವ್ಯಾಸಿ ಯಕ್ಷಗಾನ ಕಲಾವಿದರು ಕಟ್ಟಿಕೊಂಡ ಸಂಸ್ಥೆಯಾಗಿದೆ. ಪ್ರತಿ ವರ್ಷ ಅಮೆರಿಕದ ವಿವಿಧ ಭಾಗಗಳಲ್ಲಿ ಹತ್ತಾರು ಯಕ್ಷಗಾನ ಪ್ರದರ್ಶನ ನೀಡಿ ಯಕ್ಷಗಾನದ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ.
ತಾಳಮದ್ದಳೆಯಲ್ಲಿ ಹಿಮ್ಮೇಳದದಲ್ಲಿ ಉಡುಪಿಯ ಭಾಗವತರು- ಕೆ.ಜೆ. ಗಣೇಶ್, ಮದ್ದಳೆ – ಕೆ.ಜೆ. ಸುಧೀಂದ್ರ, ಚೆಂಡೆ – ಕೆ.ಜೆ. ಕೃಷ್ಣ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಜುನನಾಗಿ ಡಾ.ಎಂ.ಪ್ರಭಾಕರ ಜೋಶಿ, ಹನುಮಂತನಾಗಿ ವಾಸುದೇವರಂಗ ಭಟ್, ಬ್ರಾಹ್ಮಣ/ಕೃಷ್ಣ/ಶ್ರೀರಾಮನಾಗಿ ರಾಧಾಕೃಷ್ಣ ಕಲ್ಚಾರ್ ತಮ್ಮೂರಿನ ತಮ್ಮ ಮನೆಗಳಿಂದಲೇ ಸಂವಾದದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ತಾಂತ್ರಿಕ ಸಹಾಯಕ ಅಭಿರಾಮ್ ಶಿವಸ್ವಾಮಿ ಅವರಾಗಿದ್ದಾರೆ. ಯಕ್ಷಗಾನ ತಾಳಮದ್ದಳೆಯನ್ನು ಎರಡು ತಾಸುಗಳ ಕಾಲ, ಎಂಟಕ್ಕೂ ಅಧಿಕ ದೇಶಗಳ 3ಸಾವಿರಕ್ಕೂ ಹೆಚ್ಚಿನ ಜನರು ವೀಕ್ಷಿಸಿದ್ದಾರೆ.