ಉಡುಪಿ: ಪ್ರತಿದಿನ ಕೊರೋನಾ ಪಾಸಿಟಿವ್ ಸುದ್ದಿ ಕೇಳಿದ ಉಡುಪಿ ಜಿಲ್ಲೆಯ ಜನತೆಗೆ ಇದೀಗ ಸಿಹಿ ಸುದ್ದಿ ಕೇಳುವ ಸಮಯ. ಜಿಲ್ಲೆಯಲ್ಲಿ ಸೋಂಕು ಅಂಟಿಸಿಕೊಂಡ 45 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಉಡುಪಿಯ ಡಾ. ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯಿಂದ 18 ಮಕ್ಕಳೂ ಸೇರಿ ಒಟ್ಟು 45 ಜನರು ಶನಿವಾರ ಬಿಡುಗಡೆಯಾಗಿದ್ದಾರೆ.
ನೋವೆಲ್ ಕೊರೋನಾ ವೈಸರ್ ಮಹಾಮಾರಿಯನ್ನು ಗೆದ್ದು ತಮ್ಮ ಮನೆಗಳಿಗೆ ಹೊರಟ ಪುಟಾಣಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅವಿನಾಶ್ ಶೆಟ್ಟಿ ಅವರ ತಂಡ ಚಾಕಲೇಟ್ ಮತ್ತು ಉಡುಗೊರೆಗಳನ್ನು ಕೊಟ್ಟು ಬೀಳ್ಕೊಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಸೇರಿ ಹಲವು ವೈದ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.