ಹೊಸದಿಗಂತ ಆನ್ ಲೈನ್ ಡೆಸ್ಕ್:
ಉತ್ತರಾಖಂಡದ ತಪೋವನ ಸುರಂಗದಲ್ಲಿ ಸಿಲುಕಿರುವ 30 ಮಂದಿ ಬಳಿ ತೆರಳಲು ಭದ್ರತಾ ಸಿಬ್ಬಂದಿ ಸುರಂಗದೊಳಗೆ ಕ್ಯಾಮೆರಾ ಅಳವಡಿಕೆಗೆ ಹೊಸ ಪ್ಲಾನ್ ಮಾಡಿದ್ದಾರೆ.
ಹಿಮಸ್ಫೋಟದಿಂದ ಸುರಂಗದಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳ ಮಾಹಿತಿ ಪಡೆಯಲು ಸುರಂಗದೊಳಗೆ ಕ್ಯಾಮೆರಾ ಅಳವಡಿಕೆಗಾಗಿ ರಂಧ್ರವನ್ನು ದೊಡ್ಡದು ಮಾಡುವ ಕೆಲಸವನ್ನು ರಕ್ಷಣಾ ಸಿಬ್ಬಂದಿ ಶನಿವಾರ ಕೈಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆ ಸುರಂಗದೊಳಗೆ 75 ಎಂಎಂಗಾತ್ರದ ಹಾಗೂ 12 ಮೀಟರ್ ಉದ್ದದ ರಂಧ್ರವನ್ನು ಕೊರೆಯಲು ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದ ಮ್ಯಾನೇಜರ್ ಆರ್ ಪಿ ಅಹಿರ್ವಾಲ್ ತಿಳಿಸಿದ್ದಾರೆ.
ಏತನ್ಮಧ್ಯೆ ಇಂಟೆಕ್ ಅಡಿಟ್ ಸುರಂಗದಿಂದ ಕೆಸರು ಹೊರಹಾಕುವ ಕಾರ್ಯವು ನಡೆಯುತ್ತಿದೆ. ರಂಧ್ರದ ವ್ಯಾಸವು 250-300 ಮಿಮೀ ಆಗಿದ್ದಾಗ ಮಾತ್ರ ಕ್ಯಾಮೆರಾ ಅಳವಡಿಕೆ ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಎನ್ ಟಿಪಿಸಿ 480 ಮೆಗಾ ವ್ಯಾಟ್ ತಪೋವನ-ವಿಷ್ಣುಗಢ್ ಹೈಡ್ರೋ ಪವರ್ ಪ್ರಾಜೆಕ್ಟ್ ಮತ್ತು 13.2 ಮೆಗಾ ವ್ಯಾಟ್ ನ ರಿಷಿಗಂಗಾ ಹೈಡಲ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ. ಇದುವರೆಗೂ 38 ದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 25 ರಿಂದ 35 ಮಂದಿ ಸುರಂಗದೊಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ 166 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.