ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಾಲ್ವರಲ್ಲಿ ಮಂಗಳವಾರ ಕೊರೋನಾ ದೃಢಪಟ್ಟಿದ್ದು ಜಿಲ್ಲೆಯ ವಿವಿಧ ತಾಲೂಕುಗಳಿಗೂ ಮಾರಿ ವಿಸ್ತರಿಸತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದರಿಂದಾಗಿ ಜಿಲ್ಲೆಯ ಕೊರೋನಾ ಪೀಡಿತರ ಸಂಖ್ಯೆ 56 ಕ್ಕೆ ಏರಿದ್ದು, 45 ಜನ ಸಕ್ರೀಯ ಸೋಂಕಿತರಾಗಿದ್ದಾರೆ.
ತಮಿಳುನಾಡಿನಿಂದ ಜೊಯಿಡಾಕ್ಕೆ ಬಂದಿದ್ದ 31 ವರ್ಷದ ಮಹಿಳೆ, ಗುಜರಾತಿನಿಂದ ದಾಂಡೇಲಿಗೆ ಬಂದಿದ್ದ 24 ವರ್ಷದ ಯುವಕ, ಮುಂಬಯಿಯಿಂದ ಯಲ್ಲಾಪುರಕ್ಕೆ ಬಂದಿದ್ದ 16 ವರ್ಷದ ಯುವತಿ ಹಾಗೂ ಮುಂಬಯಿಯಿಂದ ಹೊನ್ನಾವರಕ್ಕೆ ಬಂದಿದ್ದ 34 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ. ಮೂವರು ಮಹಿಳೆಯರು ಮತ್ತು ಓರ್ವ ಯುವಕ ಸೋಂಕು ಪೀಡಿತರಾದಂತಾಗಿದೆ.
ಸೋಮವಾರ ಹೊನ್ನಾವರ ಮತ್ತು ಮುಂಡಗೋಡಕ್ಕೆ ಸೋಕು ಈಗ ಯಲ್ಲಾಪುರ, ದಾಂಡೇಲಿ ಮತ್ತು ಜೊಯಿಡಾಕ್ಕೂ ಒಕ್ಕರಿಸಿದೆ. ಹೀಗಾಗಿ ಕೇವಲ ಭಟ್ಕಳಕ್ಕೆ ಸೀಮಿತವಾಗಿದ್ದ ಈ ಕಾಯಿಲೆ ಈಗಸೆ ಬಂದವರಿಂದಾಗಿ ಜಿಲ್ಲೆಯ 11 ರಲ್ಲಿ ಏಳು ತಾಲೂಕುಗಳಿಗೆ ದಾಳಿ ಇಟ್ಟಂತಾಗಿದೆ. ಇದೀಗ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ತಂದಿದೆ. ಈ ಮಧ್ಯೆ ಜಿಲ್ಲೆಗೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುತ್ತಿರುವವರ ಸಂಖ್ಯೆ ಏರುತ್ತಿದ್ದು, ಇದು ಇನ್ನಷ್ಟು ತಲೆಬೇನೆಗೆ ಕಾರಣವಾಗಿದೆ.