ಹೊಸ ದಿಗಂತ ವರದಿ, ಕುಶಾಲನಗರ:
ಉತ್ತರ ಕೊಡಗಿನ ತೊರೆನೂರು ಗ್ರಾಮದಲ್ಲಿ ಜನತಾ ಬಡಾವಣೆಯಲ್ಲಿರುವ ಗ್ರಾಮೀಣ ಗ್ರಂಥಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕದ ಆಶ್ರಯದಲ್ಲಿ ಕೋವಿಡ್ -19 ರ ಮಾರ್ಗಸೂಚಿಯನ್ವಯ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜನಜಾಗೃತಿ ಮೂಡಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವ ಕಾರಣದಿಂದ ಗ್ರಂಥಾಲಯದ ಮೇಲ್ವಿಚಾರಕರೂ ಆದ ಪರಿಸರ ಕಾರ್ಯಕರ್ತ ಟಿ.ವಿ.ಸಾಗರ್ ತೊರೆನೂರು ಅವರ ನೇತೃತ್ವದಲ್ಲಿ ಆ ಬಡಾವಣೆಯ ನಾಗರಿಕರು ಮತ್ತು ಶಾಲಾ ಮಕ್ಕಳೇ ಗ್ರಂಥಾಲಯದಲ್ಲಿ ಸೇರಿ ಸರಳವಾಗಿ ದೀಪಾವಳಿ ಆಚರಿಸಿದರು.
ಸಾಗರ್ ತೊರೆನೂರು ಮಾತನಾಡಿ, ಪಟಾಕಿ ಸಿಡಿಸುವುದರಿಂದ ಉಂಟಾಗುವ ಅನಾಹುತ ತಪ್ಪಿಸಲು ಮತ್ತು ಪರಿಸರಕ್ಕೆ ಹಾನಿಯಾಗದಂತೆ ಎಲ್ಲರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಸಂಕಲ್ಪತೊಡಬೇಕು ಎಂದರು.
ಗೂಗಲ್ ವೆಬಿನಾರ್ ಮೂಲಕ ಹಸಿರು ದೀಪಾವಳಿಗೆ ಚಾಲನೆ ನೀಡಿದ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿಯನ್ನು ತ್ಯಜಿಸಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಹಸಿರು ಹಾಗೂ ಸ್ವಸ್ಥ ದೀಪಾವಳಿ ಆಚರಣೆಗೆ ಬದ್ಧರಾಗಬೇಕು ಎಂದರು.
ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ತೊರೆನೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಟಿ.ಬಿ.ಮಂಜುನಾಥ್ ಮಕ್ಕಳಿಗೆ ಅರಿವು ಮೂಡಿಸಿದರು.
ಗೃಹಿಣಿ ಹೇಮಾ ಶಿವಾಜಿ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ನಾಗರಿಕ ಸಿದ್ದೋಜಿರಾವ್, ಎಂ.ಸಿ
ನಾಗರಾಜು, ಟಿ.ಎನ್. ವಿಶ್ವಮೂರ್ತಿ,ಲೀಲಾವತಿ, ಶಿವಾಜಿ ಸೇರಿದಂತೆ ಒಬಡಾವಣೆಯ ನಿವಾಸಿಗಳು, ಮಕ್ಕಳು ಪಾಲ್ಗೊಂಡಿದ್ದರು.
ಹಸಿರು ದೀಪಾವಳಿ ಆಚರಣೆ ಕುರಿತ ಘೋಷಣಾ ಫಲಕಗಳನ್ನು ಹಿಡಿದ ಮಕ್ಕಳು “ಹಣತೆ ಹಚ್ಚೋಣ-ದೀಪಾವಳಿ ಆಚರಿಸೋಣ”, “ಪಟಾಕಿ ತ್ಯಜಿಸೋಣ – ಮಾಲಿನ್ಯ ತಡೆಯೋಣ”ಎಂಬಿತ್ಯಾದಿ ಘೋಷಣೆಗಳನ್ನು ಪ್ರಚಾರ ಪಡಿಸಿದರು.