ಕೋಲಾರ: ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ವಾಸವಾಗಿದ್ದ ಉತ್ತರಪ್ರದೇಶ ಮೂಲದ ೫೭ ಮಂದಿ ವಲಸೆ ಕಾರ್ಮಿಕರು ಅವರ ಹುಟ್ಟೂರಿಗೆ ಹೋಗಲು ಜಿಲ್ಲಾಡಳಿತದಿಂದ ಅನುಮತಿ ಕೊಡಿಸಲಾಗುವುದು ಎಂದು ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ತಿಳಿಸಿದರು.
ಕ್ಯಾನ್ ನೆಟ್ವರ್ಕ್ನ ನೇತೃತ್ವದಲ್ಲಿ ನಡೆದ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಸಮೀಕ್ಷೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕೊರೋನಾ ಲಾಕ್ಡೌನ್ನಿಂದಾಗಿ ಕಾರ್ಮಿಕರ ಬದುಕು ಅಂತಂತ್ರವಾಗಿದೆ, ಕೆಲಸವೂ ಇಲ್ಲ, ಜೀವನೋಪಾಯಕ್ಕೂ ಸಾಧ್ಯವಾಗದೇ ಈ ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ಹಿಂದಿರುಗಲು ಕೊರೋನಾ ಮಾರಿ ಅಡ್ಡವಾಗಿ ನಿಂತಿದೆ, ಇಂತಹ ಸಂದರ್ಭದಲ್ಲಿ ಅವರನ್ನು ಅವರ ಊರಿಗೆ ಕಳುಹಿಸಲು ಜಾಗೃತಿ ಸೇವಾ ಸಂಸ್ಥೆ ಹಾಗೂ ಕ್ಯಾನ್ ನೆಟ್ವರ್ಕ್ ಪ್ರಯತ್ನ ನಡೆಸಿದೆ ಎಂದರು.
ಈ ಕಾರ್ಮಿಕರ ದಾಖಲೆಗಳನ್ನು ಸೇವಾಸಿಂಧು ಆನ್ಲೈನ್ ತಂತ್ರಾಂಶದಲ್ಲಿ ಸರ್ಕಾರದ ಅನುಮತಿಗೆ ಕಳುಹಿಸಿಕೊಟ್ಟಿದ್ದು, ಈ ಸಂಬಂಧ ಸೋಮವಾರ ಜಿಲ್ಲಾಡಳಿತದೊಂದಿಗೆ ಮಾತನಾಡಿ ಈ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಡುವುದಾಗಿ ಧನರಾಜ್ ತಿಳಿಸಿದರು.
ಕ್ಯಾನ್ ನೆಟ್ವರ್ಕ್ನ ಮಹೇಶ್ರಾವ್ ಕದಂ ಮಾತನಾಡಿ, ಉದ್ಯೋಗ ಬಯಸಿ ಇಲ್ಲಿಗೆ ಬಂದಿರುವ ಸಾವಿರಾರು ಕಾರ್ಮಿಕರ ಬದುಕು ಇಂದು ಕೊರೋನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ, ಸರ್ಕಾರ,ಕಾರ್ಮಿಕ ಇಲಾಖೆ ಹಾಗೂ ಹಲವಾರು ದಾನಿಗಳು ಊಟ,ದಿನಸಿ,ಪಡಿತರ ನೀಡಿದ್ದಾರೆ ಆದರೆ ಕಾರ್ಮಿಕರಿಗೆ ಉದ್ಯೋಗವಿಲ್ಲದ ಕಾರಣ ಬದುಕು ನಡೆಸುವುದು ದುಸ್ತರವಾಗಿದೆ ಎಂದು ತಿಳಿಸಿದರು.
ಇದೇ ರೀತಿ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಕುರಿತು ಸಮೀಕ್ಷೆ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಕಂಡು ಬರುವ ವಲಸೆ ಕಾರ್ಮಿಕರು ಅವರ ಊರುಗಳಿಗೆ ಹೋಗಲು ಅಗತ್ಯವಾದ ಎಲ್ಲಾ ಕಾರ್ಯಗಳನ್ನು ನಾವು ಮಾಡುತ್ತೇವೆ ಎಂದರು.