ಹೊಸದಿಲ್ಲಿ: ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಆದರೆ, ಈಗಾಗಲೇ ಈ ಕಾಯಿದೆಯಿಂದ ಪ್ರಯೋಜನ ಪಡೆದಿದ್ದರೆ ಅಂಥವರಿಗೆ ಈ ಆದೇಶ ಪೂರ್ವಾನ್ವಯವಾಗದು ಎಂದು ಸ್ಪಷ್ಟಪಡಿಸಿದೆ.
2020-21ನೇ ಸಾಲಿನ ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಮರಾಠ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮಹಾರಾಷ್ಟ್ರ ಸಲ್ಲಿಕೆ ಮಾಡಿದ್ದ ಅರ್ಜಿಗಳನ್ನು ಸುಪ್ರೀಂ ಉನ್ನತ ಪೀಠಕ್ಕೆ ವರ್ಗಾವಣೆ ಮಾಡಿದೆ. ಜತೆಗೆ ಉನ್ನತ ಪೀಠದಲ್ಲಿರಬೇಕಾದ ಸದಸ್ಯರು ಹಾಗೂ ಇನ್ನಿತರರ ವಿವರಗಳ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿರುವ ಎಸ್ ಬೋಬ್ಡೆ ನಿರ್ಧಾರ ಮಾಡಲಿದ್ದಾರೆ.ಸುಪ್ರೀಂಕೋರ್ಟ್ ಆದೇಶದಲ್ಲಿ 2020-21ನೇ ಸಾಲಿನಲ್ಲಿ ಮರಾಠ ಉದ್ಯೋಗ ಹಾಗೂ ಶೈಕ್ಷಣಿಕದಲ್ಲಿ ಯಾವುದೇ ಮೀಸಲಾತಿ ಸಿಗುವುದಿಲ್ಲ. ಜತೆಗೆ ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ಅವರಿಗೆ ಯಾವುದೇ ರೀತಿಯಲ್ಲೂ ರಿಯಾಯತಿ ಸಿಗುವುದಿಲ್ಲ. ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನ ಬಾಂಬೆ ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ ಮೀಸಲಾತಿಯನ್ನ ಶೇ 16ರಿಂದ ಶೇ 13ಕ್ಕೆ ಇಳಿಸಬೇಕೆಂದು ನಿರ್ದೇಶನ ನೀಡಿತ್ತು.