ಧಾರವಾಡ: ಇಲ್ಲಿನ ಹನುಮಂತ ನಗರದ ಡಯಟ್ ಹಿರಿಯ ಉಪನ್ಯಾಸಕ ಮಹದೇವ ಬ. ಮಾಳಗಿ ಅವರ ಮನೆಗೆ ಗುರುವಾರ ಭೇಟಿ ನೀಡಿದ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶಕುಮಾರ್ ಅವರ ಆರೋಗ್ಯ ವಿಚಾರಿಸಿದರು.
ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕರಾಗಿದ್ದ ವೇಳೆ ಮಹಾದೇವ ಮಾಳಗಿ ಅವರ ಬ್ರೇನ್ ಸ್ಟ್ರೋಕ್ ಆಗಿ ಮೆದುಳು ನಿಷ್ಕ್ರೀಯಗೊಂಡಿತು. ಶೇ.80ರಷ್ಟು ಮೆದುಳು ನಿಷ್ಕ್ರಿಯವಾಗಿ ಹಾಸಿಗೆ ಹಿಡಿದಿರುವ ಮಹಾದೇವ ಅವರ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದ ಹಿನ್ನಲೆ ಭೇಟಿ ನೀಡಿದ ಸಚಿವರು, ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದರು.
ಈ ವೇಳೆ ಅನುಕಂಪದ ಆಧಾರದಡಿ ನೌಕರಿ ನೀಡಬೇಕೆಂದು ಮಹದೇವ ಅವರ ಪತ್ನಿ ಪ್ರಭಾವತಿ ಸಚಿವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ್ದ ಸಚಿವ ಸುರೇಶಕುಮಾರ್, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಎಸ್.ವಿ. ಸಂಕನೂರ, ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಬಿಇಓ ಎ.ಎ.ಖಾಜಿ ಇದ್ದರು.