ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ರಾಜ್ಯ ರಾಜಧಾನಿ ಬೆಂಗಳೂರಿನ ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ.
ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ನಮ್ಮ ಪಕ್ಕಕ್ಕೆ ಸೋಲಾಗಿದೆ. ಮತದಾರರ ತೀರ್ಪನ್ನು ಗೌರವಾನ್ವಿತವಾಗಿ ಒಪ್ಪಿಕೊಳ್ಳುತ್ತೇನೆ. ಏನಾಯ್ತು ಹೇಗಾಯ್ತು ಅನ್ನೋದನ್ನು ಚರ್ಚೆ ಮಾಡಿ ಸರಿಮಾಡಿಕೊಳ್ಳುತ್ತೇವೆ ಎಂದಿರುವ ಡಿ ಕೆ ಶಿವಕುಮಾರ್ ಸೋಲಿನ ಹೊಣೆಯನ್ನು ಹೊತ್ತಿದ್ದಾರೆ.
ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಈ ಮೂಲಕ ಕಾಂಗ್ರೆಸಿನ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ. ಸೋಲಿನ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಮ್ಮ ಕಾರ್ಯಕರ್ತರು ಶಕ್ತಿ ಮೀರಿ ಪಕ್ಷವನ್ನು ಬಲಪಡಿಸಿಲು ಹೋರಾಟ ನಡೆಸಿದ್ದಾರೆ. ಎಲ್ಲರು ನಮಗೆ ಬೆಂಬಲ ನೀಡಿದ್ದಾರೆ. ಇದು ಮೊದಲ ಚುನಾವಣೆ ಅಂತೆಲ್ಲಾ ಹೇಳುತ್ತಿದ್ದರು. ಮೊದಲ ಚುನಾವಣೆಯನ್ನು ನಾನು ಸೋತಿದ್ದೇನೆ ಆದರೆ ನಂತರ ಗೆಲ್ಲುವ ಭರವಸೆ ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ರಾಜರಾಜೇಶ್ವರಿ ನಗರದಲ್ಲಿ ಇಷ್ಟು ಅಂತರ ನಿರೀಕ್ಷೆ ಮಾಡಿರಲಿಲ್ಲ. ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿಂದ ಕೆಲವು ಸಾವಿರ ಮತಗಳ ಅಂತರದಲ್ಲಿ ಫಲಿತಾಂಶ ಬರಬಹುದು ಎಂದು ಭಾವಿಸಿದ್ದೆ. ಭವಿಷ್ಯದ ಲೆಕ್ಕಾಚಾರದೊಂದಿಗೆ ನಾವು ನಮ್ಮ ಅಭ್ಯರ್ಥಿಯನ್ನು ಸೂಚಿಸಿದ್ದೆವು. ಒಳ್ಳೆಯ ಅಭ್ಯರ್ಥಿಗೆ ಜನ ಕೂಡ ಸಹಕಾರ ನೀಡಿದ್ದಾರೆ. ಕುಸುಮಾ ಅವರು ಉತ್ತಮ ಹೋರಾಟ ಮಾಡಿದ್ದಾರೆ ಎಂದರು.
ಶಿರಾದಲ್ಲಿ ನಮ್ಮ ಲೆಕ್ಕಾಚಾರ ತಪ್ಪಾಗಿದೆ. ಅಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ನಮ್ಮ ಪಕ್ಷದ ಎಲ್ಲ ಮುಖಂಡರು ನಿರೀಕ್ಷಿಸಿದ್ದೆವು. ಅಲ್ಲಿ ಬಿಜೆಪಿಗೆ ಹೊಸದಾಗಿ ಅಷ್ಟು ಮತ ಹೋಗಿರುವುದು ಅಚ್ಚರಿ ತಂದಿದೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಹೇಗೆ ಪಡೆಯುವುದು, ಕ್ಷೇತ್ರಕ್ಕಾಗಿ ಹೇಗೆ ದುಡಿಯಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.