ಮಂಗಳೂರು: ಉಳ್ಳಾಲದ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ, ಪ್ರದೇಶಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು ಕಡಲಿನ ಅಬ್ಬರ, ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ, ಸರಕಾರದಿಂದ ಯಾವ ಯಾವ ಕಾರ್ಯ ರೂಪಿಸಬೇಕು ಎಂಬುದರ ಕುರಿತು ಜಿಲ್ಲಾಧಿಕಾರಿ ಮತ್ತು ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಡೆಗೋಡೆ ಹೇಗೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಸ್ವಾಭಾವಿಕವಾಗಿ ಕಡಲ್ಕೊರೆತದಿಂದಾಗಿ ಮೀನುಗಾರರಿಗೆ, ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ತುರ್ತಾಗಿ ತಡೆಗೋಡೆ ಮಾಡಬೇಕಾದ ಅಗತ್ಯವಿದೆ. ರೂ. 230 ಕೋಟಿ ಅನುದಾನದಲ್ಲಿ ಕಡಲ್ಕೊರೆತ ಕಾಮಗಾರಿಯು ಪ್ರಗತಿಯಲ್ಲಿದೆ, ಒಟ್ಟಾರೆಯಾಗಿ ಮೀನುಗಾರರು ಸಂಕಷ್ಟದಿಂದ ಪಾರಾಗಬೇಕೆಂಬುದು ಸರಕಾರದ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.