ಹೊಸದಿಗಂತ ಆನ್ಲೈನ್ ಡೆಸ್ಕ್:
ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ದೈತ್ಯಾಕಾರದ ಮೀನಿನ ಕಳೇಬರ ಪತ್ತೆಯಾಗಿದೆ. ತಿಮಿಂಗಿಲವನ್ನು ಹೋಲುವಂತಹ ಮೀನು ಇದಾಗಿದ್ದರೂ ಸ್ಥಳೀಯರು ಕಡಲು ಹಂದಿ (ಪರ್ಪೋಯಿಸ್ ) ನ ಕಳೇಬರ ಎಂದು ತಿಳಿಸಿದ್ದಾರೆ.
ಸುಮಾರು 10 ಫೀಟ್ ಉದ್ದದ, ಟನ್ ಗಟ್ಟಲೆ ಭಾರ ಹೊಂದಿರುವ ಮೀನು ಇದಾಗಿದೆ. ಗುರುವಾರ ನಸುಕಿನ ಜಾವ ಮೊಗವೀರಪಟ್ನದ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ದೈತ್ಯಾಕಾರದ ಮೀನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮೀನು ಕೊಳೆತ ಸ್ಥಿತಿಯಲ್ಲಿರಲಿಲ್ಲ, ಅದನ್ನು ಹೂಳಲು ಕ್ರೇನಿನ ಅಗತ್ಯವಿದೆ, ಸ್ಥಳದಲ್ಲೇ ಬಿಟ್ಟರೆ ಕೊಳೆತು ದುರ್ನಾತ ಬೀರುವ ಸಾಧ್ಯತೆ ಇರುವುದರಿಂದ ಮೀನನ್ನು ಸ್ಥಳೀಯರು ಸೇರಿ ಸಮುದ್ರಕ್ಕೆ ದೂಡಿ ಬಿಟ್ಟುಬಿಟ್ಟಿದ್ದಾರೆ. ಸುದ್ಧಿಯರಿತು ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇಲ್ಲಿನ ವಿಜ್ಞಾನಿಗಳ ತಂಡ ಉಳ್ಳಾಲಕ್ಕೆ ಭೇಟಿ ನೀಡಿ ಮೀನಿನ ಜಾತಿಯನ್ನು ಪತ್ತೆ ಮಾಡಲು ಯತ್ನಿಸಿದರೂ, ಅದಾಗಲೇ ಮೀನನ್ನು ಸಮುದ್ರಕ್ಕೆ ಬಿಡಲಾಗಿತ್ತು. ಇದರಿಂದ ಜಾತಿಯನ್ನು ಕಂಡುಹಿಡಿಯಲು ಅಸಾಧ್ಯವಾಗಿದೆ.