ಕಾರವಾರ: ಉ.ಕ ಜಿಲ್ಲೆಯಲ್ಲಿ ಅಗತ್ಯವಿರುವ ಲ್ಯಾಬ್ ಟೆಕ್ನಿಷಿಯನ್ ಮತ್ತು ನರ್ಸಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಹಾಗೂ ಅಂಬ್ಯುಲೆನ್ಸ್ಗಳನ್ನು ಶೀಘ್ರವಾಗಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸೋಮವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ೬೦೦ ಲ್ಯಾಬ್ ಟೆಸ್ಟ್ ಮಾಡುವ ಟಾರ್ಗೆಟ್ ಇದ್ದು, ಇಂದು ೯೦೦ ಟೆಸ್ಟ್ ಮಾಡಲಾಗಿದೆ. ೨೫೦೦ ಬೆಡ್ ವ್ಯವಸ್ಥೆಯನ್ನು ಕೋವಿಡ್-೧೯ ಚಿಕಿತ್ಸೆಗಾಗಿಯೇ ಸಿದ್ಧವಿರುತ್ತವೆ. ಈ ಸನ್ನಿವೇಶದಲ್ಲಿ ನರ್ಸ, ಲ್ಯಾಬ್ ಟೆಕ್ನಿಷಿಯನ್ ಮತ್ತು ೧೩ ಅಂಬ್ಯುಲೆನ್ಸ್ಗಳ ಅವಶ್ಯಕತೆ ಇದ್ದು, ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗೆ ಜಿಲ್ಲಾ ಮಂತ್ರಿ ಶಿವರಾಮ ಹೆಬ್ಬಾರ್ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ ೩೦ ಪ್ರಕರಣಗಳು ಕಂಡುಬರುತ್ತಿವೆ. ಶೇ.೪೦ರಷ್ಟು ಭಟ್ಕಳದಿಂದಲೇ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ರ್ಯಾಪಿಡ್ ಟೆಸ್ಟ್ ಮಾಡುವುದು ಅವಶ್ಯಕವಾಗಿದೆ. ಇಲ್ಲಿವರೆಗೂ ೬೩೩ ಪ್ರಕರಣಗಳಾಗಿದ್ದು, ಅದರಲ್ಲಿ ೩೭೪ ಸಕ್ರಿಯವಾಗಿದ್ದು, ೨೫೪ ಡಿಸ್ಚಾರ್ಜ್ ಆಗಿದ್ದು, ೫ ಪ್ರಕರಣ ಮರಣ ಹೊಂದಿವೆ ಎಂದು ತಿಳಿಸಿದರು.
ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯತ್ ಸಿಇಒ ಎಂ.ರೋಷನ್, ಎಸಿ ಪ್ರಿಯಾಂಗಾ ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯ್ಕ ಹಾಜರಿದ್ದರು.