ಹೊಸದಿಗಂತ ವರದಿ,ಉಪ್ಪಿನಂಗಡಿ:
ಎಟಿಎಂ ಕಾರ್ಡ್ ಬಳಸಿಲ್ಲ. ಒಟಿಪಿ ಬಂದಿಲ್ಲ. ಆದರೂ ಎಟಿಎಂ ಮೂಲಕ ರೂ. 15400 ಹಣ ಉಳಿತಾಯ ಖಾತೆಯಿಂದ ಎಗರಿಸಲ್ಪಟ್ಟ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಮೂಲತಃ ಉಪ್ಪಿನಂಗಡಿಯ ನಿವಾಸಿ, ಪ್ರಸಕ್ತ ಕಾರ್ಕಳ ತಾಲೂಕು ಈದು ಗ್ರಾಮದ ಹಾಡಿ ಮನೆ ನಿವಾಸಿ ತಾರಶ್ರೀ ನಾರಾವಿಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರು. ತುಂಬು ಗರ್ಭಿಣಿಯಾಗಿರುವ ಇವರು ಹೆರಿಗೆಗೆಂದು ತವರು ಮನೆ ಉಪ್ಪಿನಂಗಡಿಗೆ ಬಂದಿದ್ದು, ಫೆ.7 ರಂದು ಅವರ ಮೊಬೈಲ್ ಫೋನಿಗೆ ಮಧ್ಯಾಹ್ನ ಗಂಟೆ 1.05ಕ್ಕೆ ರೂ. 10,000 ಮೊತ್ತವನ್ನು ಎಟಿಎಂ ಬಳಕೆಯಿಂದ ತೆಗೆಯಲಾಗಿದೆ ಎಂದು ಸಂದೇಶ ಬಂದಿತ್ತು. ತಕ್ಷಣವೇ ಗಂಟೆ 1.06ಕ್ಕೆ ರೂ. 5400 ಮೊತ್ತವನ್ನು ಎಟಿಎಂ ಬಳಸಿ ತೆಗೆಯಲಾಗಿದೆ ಎಂಬ ಸಂದೇಶ ಬಂದಿದೆ.
ಕಳವಳಕ್ಕೀಡಾದ ತಾರಾಶ್ರೀ ಎಟಿಎಂ ಕಾರ್ಡ್ ಕಳೆದುಹೋಗಿದೆಯಾ ಎಂದು ಪರೀಕ್ಷಿಸಿದಾಗ ಎಟಿಎಂ ಕಾರ್ಡ್ ಅವರ ಬ್ಯಾಗಲ್ಲೇ ಭದ್ರವಾಗಿತ್ತು. ಬ್ಯಾಂಕ್ ಖಾತೆಗೆ ಸಂಬಂಧಿಸಿ ಯಾರೊಂದಿಗೂ ಮಾಹಿತಿ ನೀಡದಿದ್ದರೂ, ವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ಒಟಿಪಿ ಬಾರದಿದ್ದರೂ ತನ್ನ ಉಳಿತಾಯ ಖಾತೆಯಿಂದ ಹಣ ಲಪಟಾಯಿಸಲ್ಪಟ್ಟಿರುವುದು ಅವರನ್ನು ಕಂಗಾಲುಗೊಳಿಸಿದೆ.
ಈ ಕುರಿತು ಅಮೂಲಾಗ್ರ ತನಿಖೆ ನಡೆಸಿ ತನ್ನ ಖಾತೆಯಲ್ಲಿದ್ದ ಮೊತ್ತವನ್ನು ತನಗೆ ಹಿಂತಿರುಗಿಸಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ತಾರಾಶ್ರೀ ದೂರು ನೀಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಎಗರಿಸುವ ಹೊಸ ಹೊಸ ಮಾರ್ಗಗಳನ್ನು ವಂಚಕರು ಪತ್ತೆ ಹಚ್ಚುತ್ತಿದ್ದು, ಬ್ಯಾಂಕ್ಗಳಲ್ಲಿನ ಉಳಿತಾಯ ಖಾತೆದಾರರ ಹಿತರಕ್ಷಣೆಗೆ ಗಮನ ಹರಿಸಬೇಕಾಗಿದೆ.