Thursday, June 30, 2022

Latest Posts

ಎಡನೀರಿನಲ್ಲಿ ಸೆ.15, 16ರಂದು ಬ್ರಹ್ಮೈಕ್ಯರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ಪ್ರಥಮ ಆರಾಧನಾ ಕಾರ್ಯಕ್ರಮ

ಕಾಸರಗೋಡು: ಬ್ರಹ್ಮೈಕ್ಯರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪ್ರಥಮ ಆರಾಧನಾ ಕಾರ್ಯಕ್ರಮವು ಸೆ.15 ಮತ್ತು 16 ರಂದು ಎಡನೀರು ಶ್ರೀ ಮಠದ ಪರಿಸರದಲ್ಲಿ ನಡೆಸಲು ಮಂಗಳವಾರ ಶ್ರೀ ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕರ್ನಾಟಕ ಲೋಕ ಸೇವಾ ಆಯೋಗದ ನಿವೃತ್ತ ಆಯುಕ್ತ ಟಿ.ಶ್ಯಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಹಲವು ಮಹತ್ತರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಕೊರೋನಾ ನಿಬಂಧನೆಗಳ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಎಲ್ಲ ವೈದಿಕ ವಿಧಿ ವಿಧಾನಗಳೊಂದಿಗೆ ನಿರ್ವಹಿಸಲು ತೀರ್ಮಾನಿಸಲಾಯಿತು.
ಜೊತೆಗೆ ನೂತನ ಯತಿವರ್ಯರಾಗಿ ಶ್ರೀ ಸಚ್ಚಿದಾನಂದ ಭಾರತೀ ಅವರ ಪೀಠಾರೋಹಣ ಕಾರ್ಯಕ್ರಮವು ಅಕ್ಟೋಬರ್ 1 ರಂದು ಶ್ರೀ ಮಠದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದರ ಪೂರ್ವಭಾವಿಯಾಗಿ ಸೆ.19 ರಿಂದ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾದ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಪುಣ್ಯ ಕ್ಷೇತ್ರಗಳ ಸಂದರ್ಶನವು ಕುಂಬಳೆ ಸೀಮೆಯ ಎಲ್ಲ ದೇವಾಲಯಗಳಿಗೂ ಭೇಟಿ ನೀಡಿ ಹೊರನಾಡು, ಹೊರ ರಾಜ್ಯಗಳ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಕಾಂಚಿ ಕಾಮಕೋಟಿ ಜಗದ್ಗುರು ಪೀಠದಲ್ಲಿ ಸಂಪನ್ನಗೊಳ್ಳಲಿದೆ. ಸೆ.28 ರಂದು ಕಾಂಚಿ ಕಾಮಕೋಟಿ ಜಗದ್ಗುರುಗಳಾದ ಶ್ರೀ ವಿಜಯೇಂದ್ರ ಸರಸ್ವತೀ ಶ್ರೀಗಳಿಂದ ಅಧಿಕೃತವಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮರಳುವ ಶ್ರೀ ಸಚ್ಚಿದಾನಂದ ಭಾರತೀ ಅವರ ಪುರಪ್ರವೇಶ ಹಾಗೂ ಪೀಠಾರೋಹಣ ಕಾರ್ಯಕ್ರಮವನ್ನು ಅಕ್ಟೋಬರ್ 1 ರಂದು ನಡೆಸಲು ನಿರ್ಧರಿಸಲಾಯಿತು.
ಆರಾಧನೆ ಹಾಗೂ ಪೀಠಾರೋಹಣ ಕಾರ್ಯಕ್ರಮಗಳ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ಈ ಸಂದರ್ಭ ರಚಿಸಲಾಯಿತು.
ಎಡನೀರಿನಲ್ಲಿ ನಡೆದ ಸಭೆಯಲ್ಲಿ ನೂತನ ಮಠಾಧಿಪತಿಗಳಾಗಿ ಪೀಠಾರೋಹಣಗೈಯ್ಯಲಿರುವ ಶ್ರೀ ಸಚ್ಚಿದಾನಂದ ಭಾರತೀ, ಮಲ್ಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಡಾ.ಬಿ.ಎಸ್.ರಾವ್, ವಿದ್ವಾನ್ ಪಂಜ ಭಾಸ್ಕರ ಭಟ್, ಪ್ರಕಾಶ್ ರೆಡ್ಡಿ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಸೂರ್ಯನಾರಾಯಣ ಎಡನೀರು ಸ್ವಾಗತಿಸಿ ಸಭೆಯನ್ನು ನಿರ್ವಹಿಸಿದರು. ರಾಜೇಂದ್ರ ಕಲ್ಲೂರಾಯ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss