Wednesday, August 10, 2022

Latest Posts

ಎಡನೀರು ಮಠದ ನೂತನ ಪೀಠಾಧೀಶರಿಂದ ಕುಂಬಳೆ ಸೀಮೆಯ ವಿವಿಧ ಕ್ಷೇತ್ರಗಳ ಪರ್ಯಟನೆ

ಕಾಸರಗೋಡು: ಇತಿಹಾಸ ಪ್ರಸಿದ್ಧ ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ವಿಷ್ಣುಪಾದ ಸೇರಿದ ಬಳಿಕ ನೂತನ ಪೀಠಾಧಿಪತಿಗಳಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಂಬ ನಾಮಧೇಯಾಂಕಿತರಾಗಿ ನಿಯುಕ್ತರಾದ ಶ್ರೀ ಜಯರಾಮ ಮಂಜತ್ತಾಯ ಅವರ ಪೀಠಾರೋಹಣದ ಪೂರ್ವಭಾವಿಯಾಗಿ ಕುಂಬಳೆ ಸೀಮೆಯ ವಿವಿಧ ಪುಣ್ಯ ಕ್ಷೇತ್ರಗಳ ಪರ್ಯಟನೆ ಕಾರ್ಯಕ್ರಮವು ಸೋಮವಾರ ಆರಂಭಗೊಂಡಿತು.
ಇತಿಹಾಸ ಪ್ರಸಿದ್ಧ ಅಡೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇಗುಲದಿಂದ ಆರಂಭಗೊಂಡ ಕ್ಷೇತ್ರ ಸಂದರ್ಶನ ಪರ್ಯಟನೆಯು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದಾಗ ಕ್ಷೇತ್ರದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ದೇವಸ್ಥಾನದ ಹಿರಿಯ ಅಧಿಕಾರಿ ಎಚ್.ಗೋಪಾಲಕೃಷ್ಣ ಭಟ್ ಹಾಗೂ ದೇಗುಲದ ಅರ್ಚಕರು, ಸಿಬ್ಬಂದಿ ವರ್ಗದವರು, ಊರ ಭಕ್ತ ಮಹಾಶಯರು ಆದರದಿಂದ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ, ಮುಜುಂಗಾವು ಪಾರ್ಥಸಾರಥಿ ಶ್ರೀಕೃಷ್ಣ ಕ್ಷೇತ್ರ ಸಂದರ್ಶನದ ನಂತರ ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಾಯಿಪ್ಪಾಡಿ ಅರಮನೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ ದರ್ಶನ ನೆರವೇರಿಸಲಾಯಿತು. ವಿವಿಧ ದೇವಾಲಯಗಳ ಸಂದರ್ಶನದ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತಜನರು ಭಾಗವಹಿಸಿದ್ದರು. ಮುಂದಿನ ಕೆಲವು ದಿನಗಳ ಕಾಲ ದೇಗುಲ ಸಂದರ್ಶನ ಕಾರ್ಯಕ್ರಮವು ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss