ಮಂಗಳೂರು: ಬಹುತೇಕ ಮಂದಿಗೆ ಭಾನುವಾರ ರಜಾ ದಿನವಾದರೆ ಈ ಪರಿಸರ ಪ್ರೇಮಿಗಳು ಮಾತ್ರ ರಜೆಯ ಮೂಡ್ನಲ್ಲಿರಲಿಲ್ಲ. ಅವರಲ್ಲಿ ಪರಿಸರ ಕಾಳಜಿಯ ಜೋಶ್ ಇತ್ತು. ರಜೆಯ ದಿನದಲ್ಲಿ ಒಟ್ಟು ಸೇರಿದ 60ಕ್ಕೂ ಅಧಿಕ ಪರಿಸರ ಪ್ರೇಮಿಗಳು ಶಕ್ತಿನಗರದಲ್ಲಿನ ಶ್ರೀನಿವಾಸ ಮಲ್ಯ ಬಡಾವಣೆಯ ಪರಿಸರದಲ್ಲಿ 670 ಗಿಡಗಳನ್ನು ನೆಡುವ ಮೂಲಕ ಈ ಭಾನುವಾರವನ್ನು ಹಸಿರಾಗಿಸಿದ್ದಾರೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್ಇಸಿಎಫ್) ಸದಾ ಒಂದಲ್ಲಾ ಒಂದು ಪರಿಸರ ಕಾರ್ಯಕ್ರಮಗಳ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸುತ್ತಲೇ ಬಂದಿದೆ. ಸಮಯ ಸಿಕ್ಕಾಗಲೆಲ್ಲೇ ಈ ಒಕ್ಕೂಟದಲ್ಲಿನ ಪರಿಸರ ಪ್ರೇಮಿಗಳು ಒಟ್ಟು ಸೇರಿ ಪರಿಸರ ಸಂರಕ್ಷಣೆಯ ಪ್ಲ್ಯಾನ್ ಮಾಡುತ್ತಾರೆ. ಎಲ್ಲೆಲ್ಲಿ ಖಾಲಿ ಸ್ಥಳವಿದೆ ಎಂಬುದನ್ನು ಗುರುತಿಸಿ ಇಲಾಖೆಯ ಅನುಮತಿಯೊಂದಿಗೆ ಗಿಡಗಳನ್ನು ನೆಡುವ ಕಾಯಕದಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಈ ಭಾನುವಾರವೂ ಇವರ ಕಾಯಕ ಮುಂದುವರಿದಿತ್ತು.
60ಕ್ಕೂ ಅಧಿಕ ಮಂದಿ ಭಾಗಿ
`ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ’ ಕಾರ್ಯಕ್ರಮದ ಅಂಗವಾಗಿ ಎನ್ಇಸಿಎಫ್ ಹಸಿರುವ ಹೊದಿಕೆ ಕಾರ್ಯಕ್ರಮವನ್ನು ಈ ಭಾನುವಾರ ಮಂಗಳೂರು ವ್ಯಾಪ್ತಿಯಲ್ಲಿ ಆಯೋಜಿಸಿತ್ತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಮತ್ತು ಮಂಗಳೂರು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎನ್ಇಸಿಫ್ನ ಸದಸ್ಯರು ಶ್ರೀನಿವಾಸ ಮಲ್ಯ ಬಡಾವಣೆಯ ಉತ್ಸಾಹಿಗಳು ಸೇರಿದಂದೆ 60ಕ್ಕೂ ಅಧಿಕ ಮಂದಿ ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು.
ಬೆಳಗ್ಗಿನಿಂದ ಸಂಜೆಯವರೆಗೆ ಶ್ರೀನಿವಾಸ ಮಲ್ಯ ಬಡಾವಣೆಯ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮುಂದುವರಿದಿತ್ತು. ಇನ್ನೂ ಎರಡು ದಿನ ಈ ಕಾರ್ಯ ನಡೆಯಲಿದ್ದು ಎರಡೂವರೆ ಎಕರೆ ಪ್ರದೇಶದಲ್ಲಿ 2500 ಗಿಡಗಳನ್ನು ನೆಡಲಾಗುವುದು ಎನ್ನುತ್ತಾರೆ ಎನ್ಇಸಿಎಫ್ನ ಕಾರ್ಯದರ್ಶಿ ಶಶಿಧರ ಶೆಟ್ಟಿ.
ವರ್ಷದೊಳಗೆ 16ಸಾವಿರ ಗಿಡ ನೆಡುವ ಯೋಜನೆ
ಪ್ರತಿ ಬಡಾವಣೆಯ ಸುತ್ತ ಕಿರು ಅರಣ್ಯ ಇರಬೇಕೆಂಬ ನಿಯಮವಿದೆ. ಆದರೆ ಅದು ಸಾಧ್ಯವಾಗುತ್ತಲೇ ಇಲ್ಲ. ಪ್ರತಿಯೊಬ್ಬರೂ ಬಡಾವಣೆ ಸುತ್ತ ಕಿರು ಅರಣ್ಯಕ್ಕೆ ಆದ್ಯತೆ ನೀಡಬೇಕು. ಈಗಿನ ಮೂಡಾ ಆಯುಕ್ತ ದಿನೇಶ್ ಕುಮಾರ್ ಇವರು ಮುತುವರ್ಜಿ ವಹಿಸಿ ಮೂಡಾ ಬಡಾವಣೆ ವ್ಯಾಪ್ತಿಯಲ್ಲಿ ಕಿರು ಅರಣ್ಯಕ್ಕೆ ಆದ್ಯತೆ ನೀಡಿರುವುದು ಖುಷಿ ತಂದಿದೆ. ಮುಂದಿನ ಒಂದು ವರ್ಷದಲ್ಲಿ 46 ಬಡಾವಣೆ ವ್ಯಾಪ್ತಿಯಲ್ಲಿ 16ಸಾವಿರ ಗಿಡಗಳನ್ನು ನೆಡುವ ಯೋಜನೆಯಿದೆ. ಸಾರ್ವಜನಿಕರು ಕೂಡ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನುತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಡುತ್ತಾರೆ ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ.