ಮೈಸೂರು: ದೇಶದ ರೈತರಿಗೆ ನನ್ನ ಬೆಳೆ ನನ್ನ ಹಕ್ಕು ಆಗಬೇಕು. ಅವರು ಬೆಳೆದ ಬೆಳೆಗಳಿಗೆ ಒಂದು ದೇಶ ಒಂದು ಮಾರುಕಟ್ಟೆ ಆಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದರು.
ಗುರುವಾರ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು, ಬಂಡವಾಳ, ಶ್ರಮ ಉತ್ಪಾಧನೆ ಎಲ್ಲವೂ ರೈತರದ್ದು, ಎಲ್ಲದರಲ್ಲೂ ಅವರು ಸ್ವಾತಂತ್ರö್ಯರೂ, ಆದರೆ ಬೆಳೆದ ಬೆಳೆಗಳನ್ನು ಮಾರಾಟ ಮಾಡುವುದರಲ್ಲಿ ಮಾತ್ರ ರೈತರು ಸ್ವತಂತ್ರರಾಗಿರಲಿಲ್ಲ, ಅವರ ಕೈಗಳು, ಸ್ವಾತಂತ್ರö್ಯವನ್ನು ಕಾನೂನು ಕಟ್ಟಳೆಗಳಿಂದ ಕಟ್ಟಿ ಹಾಕಲಾಗಿತ್ತು. ಹೀಗಾಗಿ ರೈತರಿಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ ಅವರ ಆದಾಯ ದ್ವಿಗುಣಗೊಳ್ಳುತ್ತಿರಲಿಲ್ಲ.
ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳೆಗಳ ಮಾರಾಟದಲ್ಲೂ ರೈತರಿಗೆ ಸ್ವಾತಂತ್ರö್ಯ ಇರಬೇಕೆಂಬ ನಿಟ್ಟಿನಲ್ಲಿ ಕೃಷಿ ಮಸೂದೆ, ಎಪಿಎಂಸಿಗೆ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಒಂದು ದೇಶ, ಒಂದು ಮಾರುಕಟ್ಟೆ, ನನ್ನ ಬೆಳೆ ನನ್ನ ಹಕ್ಕು ಆಗಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದಿದ್ದಾರೆ. ಈ ಮಸೂದೆಯಿಂದ ದೇಶದ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ, ತಮಗೆ ಸರಿ ಎನಿಸಿದ ಬೆಲೆ ದೊರಕಿದ ಕಡೆ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.
ನಾನು ಚಿಕ್ಕವನಿದ್ದಾಗ ಅಮೆರಿಕಾದಿಂದ ಗೋಧಿ ತಂದು ಕೊಡುತ್ತಿದ್ದರು. ೧೯೯೦ರ ದಶಕದಲ್ಲಿ ಉದಾರೀಕರಣ ಬಂದಾಗಲೂ ರೈತನಿಗೆ ಸ್ವಾಭಿಮಾನದ ಬದುಕು ಸಾಧ್ಯ ಆಗಲಿಲ್ಲ. ಆದ್ದರಿಂದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ-೨೦೨೦, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ-೨೦೨೦ ಜಾರಿಗೆ ತಂದಿದ್ದೇವೆ. ಈ ಎರಡಕ್ಕೂ ಎಪಿಎಂಸಿ ಕಾಯ್ದೆಯಿಂದ ತೊಡಕು ಉಂಟಾಗುತ್ತಿತ್ತು. ಆದ್ದರಿಂದ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದಿದ್ದೇವೆ. ಎಪಿಎಂಸಿಯಲ್ಲಿ ಮತ್ತಷ್ಟು ಸುಧಾರಣೆಗೆ ನಾವು ಬದ್ದರಾಗಿದ್ದೇವೆ. ಮಾರಾಟ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ವಿನಾಕಾರಣ ಈ ಬಗ್ಗೆ ವಿರೋಧ ಮಾಡುತ್ತಿವೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಆ ಮೂಲಕ ಅಭಿವೃದ್ಧಿಗೆ ತೊಡಕಾಗುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.
ಎಪಿಎಂಸಿ ರಾಜ್ಯದ ವಿಷಯವಾಗಿದೆ. ಅದಕ್ಕೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಎಪಿಎಂಸಿಯಲ್ಲಿ ಮತ್ತಷ್ಟು ಸುಧಾರಣೆಗೆ ನಾವು ಬದ್ದರಾಗಿದ್ದೇವೆ. ರಾಜ್ಯ ಸಹಕಾರ ಸಚಿವರಿಗೆ ಕೇಂದ್ರದಿoದ ಸಂಪೂರ್ಣ ಸಹಕಾರ ಸಿಕ್ಕಿದೆ. ಒಕ್ಕೂಟ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಗೌರವ ನೀಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ಬಗ್ಗೆ ನನ್ನ ಕಾಂಗ್ರೆಸ್ ಸ್ನೇಹಿತರು ಬೀದಿ ನಾಟಕ ಶುರು ಮಾಡಿದ್ದಾರೆ. ಆ ನಾಟಕದ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮಸೂದೆಯಲ್ಲಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ ಎಂದು ಕಾಂಗ್ರೆಸ್ ನಾಯಕರು, ರೈತರು ಹಾಗೂ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಅಪಪ್ರಚಾರದ ರಾಜಕಾರಣ ಮಾಡುತ್ತಿದ್ದಾರೆ. ಮಸೂದೆಯಲ್ಲಿ ಬೆಂಬಲ ಬೆಲೆ ತೆಗೆದು ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಯಾರೇ ಲೋಪ ತೋರಿಸಲಿ. ನಾನು ಅವರು ಹೇಳಿದಂತೆ ಕೇಳಲು ಸಿದ್ದ ಎಂದು ಸವಾಲು ಹಾಕಿದರು. ಹಾರಿಕೆ ಸುದ್ದಿಯನ್ನು ಹರಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ನಾಯಕರಾಗಿದ್ದ ಕಪಿಲ್ ಸಿಬಲ್ ಇದನೆಲ್ಲಾ ಶಿಫಾರಸ್ಸು ಮಾಡಿದ್ದರು. ನಿಮ್ಮ ಚುನಾವಣಾ ಪ್ರಣಾಳಿಕೆಯಲಿ ಇದು ಇದೆ. ಆದರೂ ಕೂಡ ಕಾಂಗ್ರೆಸ್ ನಾಯಕರು ಜನರ ಹಾದಿ ತಪ್ಪಿಸುವ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.
ರೈತರ ಅನುಕೂಲಕ್ಕಾಗಿ ನಾವು ಹೊಸ ಕಾನೂನು ತಂದಿದ್ದೇವೆ. ಕಾಂಗ್ರೆಸ್ಗೆ ನಿನ್ನೆ ಹೇಳಿದ್ದು ಇವತ್ತಿಗೆ ಮರೆತು ಹೋಗಿರುತ್ತೆ. ಇವತ್ತು ಮಾತನಾಡಿದ್ದು ನಾಳೆಗೆ ಮರೆತು ಹೋಗಿರುತ್ತೆ. ನಿಮಗೆ ಮಾಡಲು ಏನೂ ಕೆಲಸ ಇಲ್ಲದೇ ಇದ್ದರೆ ಮಾಸ್ಕ್ ಹಾಕಿಕೊಂಡು ಮನೆಯಲ್ಲಿ ಕುಳಿತುಕೊಳ್ಳಿ. ಮಾತನಾಡುವುದನ್ನು ಕಡಿಮೆ ಮಾಡಿ. ರೈತರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಚಾಳಿ ಕೋವಿಡ್ ರೀತಿಯಲ್ಲಿ ರೈತರಿಗೆ ಹರುಡುವುದು ತಪುö್ಪತ್ತದೆ. ಸ್ಯಾನಟೈಸ್ ಹಾಕಿಕೊಂಡು ಸ್ವಚ್ಛ ಮಾಡಿಕೊಳ್ಳಿ. ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್, ಮುಖಂಡರಾದ ಎಸ್.ಮಹದೇವಯ್ಯ, ಯಶಸ್ವಿನಿ ಸೋಮಶೇಖರ್, ವಕ್ತಾರರಾದ ಮೋಹನ್, ಶ್ರೀನಿವಾಸಗೌಡ ಮತ್ತಿತರರು ಉಪಸ್ಥಿತರಿದ್ದರು.