ಕೋಲಾರ: ಎಪಿಎಂಸಿ ವ್ಯಾಪ್ತಿಯಲ್ಲಿನ ಸಿಎಂಆರ್ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಸದರಿ ಮಂಡಿಯನ್ನು ಮೂರು ದಿನಗಳ ಕಾಲ ಸೀಲ್ಡೌನ್ ಮಾಡುತ್ತಿರುವುದಾಗಿ ತಾಲ್ಲೂಕು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ತಿಳಿಸಿದರು.
ಈ ಸಂಬಂಧ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿದ ಅವರು, ಸೋಂಕು ತಡೆಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿದೆ ಎಂದರು.
ಸಿಎಂಆರ್ ಮಂಡಿಯು ಎಪಿಎಂಸಿ ಪ್ರಾಂಗಣದಲ್ಲಿಲ್ಲ, ಅದರ ಬದಲಾಗಿ ಮಾರುಕಟ್ಟೆ ಆವರಣದಿಂದ ಹೊರಗಡೆಯಿದೆ, ಆದರೂ ಸೋಂಕಿನ ಆತಂಕದಿಂದಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಸೀಲ್ಡೌನ್ ಮಾಡಲಾಗುತ್ತಿದೆ ಎಂದರು.
ಈ ಸಂಬಂಧ ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸೋಂಕಿತ ವ್ಯಕ್ತಿ ಕೆಲಸ ಮಾಡುತ್ತಿದ್ದ ಮಂಡಿ ಸುತ್ತಲೂ ಫೆನ್ಸಿಂಗ್ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಸೋಂಕಿತ ವ್ಯಕ್ತಿ
ಕೋವಿಡ್ ಆಸ್ಪತ್ರೆಗೆ
ಸೋಂಕಿತ ವ್ಯಕ್ತಿ ಬೇರೆ ಜಿಲ್ಲೆಗೆ ಹೋಗಿ ಬಂದ ಟ್ರಾವೆಲ್ ಹಿಸ್ಟರಿ ಹೊಂದಿದವರಾಗಿದ್ದು, ಸ್ಥಳೀಯರಲ್ಲ ಸೋಂಕು ಪತ್ತೆಯಾದ ತಕ್ಷಣ ಆತನನ್ನು ಎಸ್ಎನ್ಆರ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಬುಧವಾರ ಸಂಜೆ ಅಧಿಕೃತ ಮಾಹಿತಿ ಬಂದ
ಹಿನ್ನೆಲೆಯಲ್ಲಿ ಮಾರುಕಟ್ಟೆ ಆವರಣ, ಆತ ಕೆಲಸ ಮಾಡಿದ್ದ ಮಂಡಿ ಸುತ್ತಮುತ್ತ ರೋಗಾಣು ನಿರೋಧಕ ಔಷಧಿ ಸಿಂಪಡಣೆ ಮಾಡಲಾಗಿದೆ ಎಂದು ತಿಳಿಸಿದರು.
ಯಾವುದೇ ರೈತರು ಟೊಮೆಟೊ ಮಂಡಿಗೆ ಬರದಂತೆ ಎಲ್ಲ ರೀತಿಯ ಸೂಚನೆಗಳನ್ನು ನೀಡಲಾಗಿದೆ. ಗುರುವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ನಡೆಸಿರುವುದು ತಪ್ಪಾಗಿದ್ದು, ಇದು ನನ್ನ ಗಮನಕ್ಕೆ ಬಂದಿಲ್ಲ. ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಅಗತ್ಯವಿದ್ದರೆ ಸೀಲ್ಡೌನ್ ಮುಂದುವರೆಸಲಾಗುವುದು ಎಂದು ತಿಳಿಸಿದರು.
ತರಕಾರಿ ವಾಹನ ಕಳಿಸಿ
ರೈತರು ಬಾರದಿರಿ
ಕೊರೊನಾದಿಂದಾಗಿ ಆತಂಕ ಎಲ್ಲೆಡೆ ಸಾಮಾನ್ಯವಾಗಿದೆ. ರೈತರು ಯಾವುದೇ
ಕಾರಣಕ್ಕೂ ಎಪಿಎಂಸಿ ಮಾರುಕಟ್ಟೆಗೆ ಖುದ್ದು ಬರಬೇಡಿ. ತರಕಾರಿಗಳನ್ನು ಟೆಂಪೋ,
ಟ್ರಾಕ್ಟರ್ಗಳಲ್ಲಿ ಕಳುಹಿಸಿಕೊಡಿ, ನಿಮ್ಮ ಬ್ಯಾಂಕ್ ಖಾತೆಗೆ ಆನ್ಲೈನ್ ಪೇಮೆಂಟ್ ಮಾಡುತ್ತೇವೆ. ಸದ್ಯದ ಕಷ್ಟದ ಪರಿಸ್ಥಿತಿಯಲ್ಲಿರುವುದರಿಂದಾಗಿ ಎಲ್ಲರೂ ಸಹಕರಿಸಿ ಕೊರೊನಾ ಹೋರಾಟದಲ್ಲಿ ಜಯಗಳಿಸಲು ಶ್ರಮಿಸೋಣ ಎಂದು ಮನವಿ ಮಾಡಿದರು.
ಕೊರೋನಾ ಟೆಸ್ಟ್ಗೆ
ಆರೋಗ್ಯ ಕೇಂದ್ರ
ಈಗಾಗಲೇ ಎಪಿಎಂಸಿಯಲ್ಲಿ ಆರೋಗ್ಯ ಇಲಾಖೆಗಾಗಿ ಕೊಠಡಿಯನ್ನು ನೀಡಲಾಗಿದ್ದು, ವರ್ತಕರು ಸೇರಿದಂತೆ ಎಲ್ಲರೂ ಕೊರೊನಾ ಟೆಸ್ಟ್ಗೆ ಒಳಗಾಗಿ ಎಂದು ಮನವಿ ಮಾಡಿದ ಅಧ್ಯಕ್ಷರು, ಕೋಲಾರದಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಲ್ಯಾಬೋರೇಟರಿ ಆರಂಭಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಎಪಿಎಂಸಿ ನಿರ್ದೇಶಕರಾದ ದೇವರಾಜ್,ಅಪ್ಪಯ್ಯಪ್ಪ ಉಪಸ್ಥಿತರಿದ್ದರು.