ಹೊಸದಿಲ್ಲಿ: ಲಷ್ಕರ್ ಇ ತೊಯ್ಬಾದ ಮುಖ್ಯಸ್ಥ ಮಹಮದ್ ಹಫೀಜ್ ಸಯಿದ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ ಸಲ್ಲಿಸಿದೆ. ಫಲಾ-ಐ-ಇನ್ಸಾನಿಯತ್ (ಎಫ್ಐಎಫ್) ಫೌಂಡೇಶನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಫೀಜ್ ಸಯಿದ್ ವಿರುದ್ಧ ಇಡಿ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
2018ರಲ್ಲಿ ಮಹಮದ್ ಸಲ್ಮಾನ್ ಮತ್ತು ಮಹಮದ್ ಸಲೀಂ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿ ತನಿಖೆ ನಡೆಸಿದ ನಂತರ, ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.
ಕೇವಲ ಹಫೀಜ್ ಸಯಿದ್ ಅಲ್ಲದೆ ಆತನ ಸಹಚರ ಶಹೀದ್ ಮಹಮದ್, ದುಬೈ ಮೂಲದ ಫಂಡ್ ಮ್ಯಾನೇಜರ್ ಮಹಮದ್ ಕಮ್ರಾನ್ ಮತ್ತು ದಿಲ್ಲಿ ಮೂಲದ ಹವಾಲಾ ಆಪರೇಟರ್ ಮಹಮದ್ ಸಲೀಮ್ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಕಾನೂನುಬಾಹಿರವಾಗಿ ನಿರ್ವಹಿಸಲ್ಪಡುತ್ತಿದ್ದ ಹವಾಲಾ ಚಾನೆಲ್ಗಳ ಮೂಲಕ ಎಫ್ಐಎಫ್ ಫಂಡ್ಗಳನ್ನು ಸ್ವೀಕರಿಸಿದ ಪ್ರಕರಣದಲ್ಲಿ ಸಲ್ಮಾನ್ ಭಾಗಿಯಾಗಿದ್ದ ಎಂದು ಇಡಿ ಗುರುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಫ್ಐಎಫ್ ಪಾಕಿಸ್ತಾನ ಮೂಲದ ಸಂಸ್ಥೆಯಾಗಿದ್ದು, ಜಮಾತ್-ಉದ್-ದಾವಾದಿಂದ ಸ್ಥಾಪಿಸಲಾಗಿದೆ. ಜೆಯುಡಿ ಸಂಸ್ಥೆ ಎಲ್ಇಟಿಯ ಅಂಗ ಸಂಸ್ಥೆಯಾಗಿದೆ.
ಮಾರ್ಚ್ 2012ರಲ್ಲಿ ವಿಶ್ವಸಂಸ್ಥೆ ಎಫ್ಐಎಫ್ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆಯೆಂದು ಗುರುತಿಸಿದೆ. ಭಾರತವೂ ಕೂಡ ಎಫ್ಐಎಫ್ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ)ಯಡಿ ಆಗಸ್ಟ್ 2016ರಲ್ಲಿ ಎಫ್ಐಎಫ್ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಎಫ್ಐಎಫ್ ಸಂಘಟನೆಯನ್ನು ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಲು ಎಲ್ಇಡಿ ಬಳಸಿಕೊಳ್ಳುತ್ತಿದೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ನಲ್ಲಿ ಹೇಳಿದೆ.