ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಎರಡನೇ ಟೆಸ್ಟ್ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ಪ್ರೇಮಿಗಳಲ್ಲಿ ಆಘಾತ ತಂದಿದೆ. ಈ ನಡುವೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ಗರಂ ಆಗಿರುವುದು ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.
‘ಅಲ್ಲಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಮೊದಲು ಅಲ್ಲೇನಾಯಿತು ಅದನ್ನು ತಿಳಿದು ಕೊಂಡ ಮಾತನಾಡಿ. ಅರ್ಧ ಸತ್ಯ ತಿಳಿದು ಪ್ರಶ್ನೆ ಕೇಳಲು ಬರಬೇಡಿ’ ಎಂದು ಏರು ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೈದಾನದಲ್ಲಿ ಕೊಹ್ಲಿ ತಮ್ಮ ಆಕ್ರಮಶೀಲ ಮನೋಭಾವದ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು. ಇದಕ್ಕೂ ಮೊದಲು ತಮ್ಮ ಬ್ಯಾಟಿಂಗ್ ಕುರಿತು ಕೇಳಿದ್ದ ಪ್ರಶ್ನೆಗೂ ಕಿಡಿಕಾರಿದ್ದ ಕೊಹ್ಲಿ ಐ ಆಮ್ ಆಲ್ರೈಟ್, ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಹೊರಗಿನ ಜನರಂತೆ ಯೋಚಿಸಲು ನಾನು ಬಯಸುವುದಿಲ್ಲ. ಒಂದು ಇನ್ನಿಂಗ್ ನಲ್ಲಿ ವಿಫಲವಾಗಿದ್ದಕ್ಕೆ, ನನ್ನ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡುತ್ತಿರುವುದು ನನಗೆ ತಿಳಿದಿದೆ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.