Sunday, July 3, 2022

Latest Posts

ಎರಡನೇ ಹಂತದ ಗ್ರಾ.ಪಂಗಳ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಹೊಸ ದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯಲ್ಲಿ ಎರಡನೇ ಹಂತದ 102 ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೆ ಡಿಸೆಂಬರ 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾದಾಮಿ ಮತ್ತು ಗುಳೇದಗುಡ್ಡದಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಈ ವಿಷಯ ತಿಳಿಸಿದ ಅವರು ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಹುನಗುಂದ, ಇಲಕಲ್ಲ, ಗುಳೇದಗುಡ್ಡ ತಾಲೂಕುಗಳ ಒಟ್ಟು 102 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. 1380 ಸ್ಥಾನಗಳಿಗೆ 3756 ಅಭ್ಯರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಉಳಿದಿದ್ದಾರೆ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ಜರುಗಲಿರುವ ಚುನಾವಣೆಗೆ ಒಟ್ಟು 6053 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆ 172, ಬಾದಾಮಿ 202, ಗುಳೇದಗುಡ್ಡ 55, ಹುನಗುಂದ 104 ಹಾಗೂ ಇಲಕಲ್ಲ 120 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಪ್ರೊಸಿಡಿಂಗ್ ಆಫೀಸರ್ಸ್, ಪೋಲಿಂಗ್ ಆಫೀಸರ್ಸ್‍ಗಳನ್ನು ನೇಮಿಸಲಾಗಿದೆ. ಕೋವಿಡ್ ಮುಂಜಾಗ್ರತೆ ದೃಷ್ಠಿಯಿಂದ ಪ್ರತಿ ಮತಗಟ್ಟೆಗಳಲ್ಲಿ ಕೋವಿಡ್ ಸುರಕ್ಷತೆಗಾಗಿ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನರ್ ಹಾಗೂ ಕೋವಿಡ್ ಸುರಕ್ಷತಾ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎರಡನೇ ಹಂತದ ಚುನಾವಣೆಯಲ್ಲಿ 477384 ಮತದಾರರಿದ್ದು, ಈ ಪೈಕಿ 240007 ಪುರುಷರು, 237352 ಮಹಿಳಾ ಹಾಗೂ 25 ಇತರೆ ಮತದಾರರಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 64005 ಪುರುಷ, 64755 ಮಹಿಳಾ, 11 ಇತರೆ ಸೇರಿ ಒಟ್ಟು 128771 ಮತದಾರಿದ್ದರೆ, ಬಾದಾಮಿಯಲ್ಲಿ 74641 ಪುರುಷ, 73248 ಮಹಿಳಾ, 10 ಇತರೆ ಸೇರಿ 147899 ಮತದಾರರಿದ್ದಾರೆ. ಗುಳೇದಗುಡ್ಡದಲ್ಲಿ 23021 ಪುರುಷ, 22287 ಮಹಿಳಾ, 1 ಇತರೆ ಸೇರಿ ಒಟ್ಟು 45309, ಹುನಗುಂದದಲ್ಲಿ 35093 ಪುರುಷ, 34823 ಮಹಿಳಾ, 1 ಇತರೆ ಸೇರಿ ಒಟ್ಟು 69917 ಹಾಗೂ ಇಲಕಲ್ಲಿನಲ್ಲಿ 43247 ಪುರುಷ, 42239 ಮಹಿಳಾ ಹಾಗೂ 2 ಇತರೆ ಸೇರಿ ಒಟ್ಟು 85488 ಮತದಾರರಿದ್ದಾರೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ಗುಳೇದಗುಡ್ಡ ಮತ್ತು ಬಾದಾಮಿ ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss