ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಥಮ ಬಾರಿಗೆ ಜನ್ಮಿಸಿದ ಆನೆ ಮರಿಗೆ ಸೋಮವಾರ ವಿದ್ಯುಕ್ತವಾಗಿ ನಾಮಕಾರಣ ಶಾಸ್ತ್ರ ನಡೆದು ಶಿವಾನಿ ಎಂಬ ಹೆಸರನ್ನು ಇಡಲಾಯಿತು.
ಕ್ಷೇತ್ರದಲ್ಲಿ ಹಿಂದಿನಿಂದಲೂ ಗಜಸೇವೆಯ ಪರಂಪರೆ ಇದೆ. ಜಾತ್ರೆ, ನಡಾವಳಿ , ದೀಪೋತ್ಸವ, ರಾಷ್ಟ್ರ, ರಾಜ್ಯದ ವಿಶೇಷ ಅತಿಥಿಗಳು ಬಂದಾಗ ಸಂಪ್ರದಾಯ ಪೂರ್ವಕವಾಗಿ ಆನೆಗಳನ್ನು ಬಳಸಲಾಗುತ್ತಿದೆ.
ಕ್ಷೇತ್ರದಲ್ಲಿ ಸಾಕಿದ ಆನೆ ಮರಿ ಇಟ್ಟಿರುವುದು ಇದೇ ಪ್ರಥಮ. ಇಂದು ನಮಗೆ ಸಂಭ್ರಮದ ದಿನವಾಗಿದ್ದು ಶಿವನ ಆಶ್ರಯದಲ್ಲಿ ಬೆಳೆಯುವುದರಿಂದ ಆನೆ ಲಕ್ಷ್ಮಿಯ ಮಗಳಿಗೆ ‘ಶಿವಾನಿ‘ ಎಂದು ನಾಮಕರಣ ಮಾಡಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಕ್ಷೇತ್ರದ ವತಿಯಿಂದ ಸಂಪ್ರದಾಯ ಪ್ರಕಾರ ಆನೆ ಮರಿಗೆ ನಾಮಕರಣ ಮಾಡುವ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ಲಕ್ಷ್ಮಿ ಆನೆಯನ್ನು ಬನ್ನೇರುಘಟ್ಟ ಕಾಡಿಗೆ ಕಳುಹಿಸಿ ಗರ್ಭಧಾರಣೆ ಮಾಡಿಸಲಾಗಿದ್ದು ಇದೀಗ ಗಜಗರ್ಭವೆಂಬಂತೆ ಇಡೀ ಪ್ರಾಣಿಸಂಕುಲದಲ್ಲಿ ಹೆಚ್ಚು ಸಮಯ ಗರ್ಭಧರಿಸುವ ಪ್ರಾಣಿ ಆನೆಯಾಗಿದ್ದು ಇಲ್ಲಿನ ಲಕ್ಷ್ಮಿ ಕೂಡ ಎರಡುವರ್ಷ ಎರಡು ತಿಂಗಳ ಬಳಿಕ ಜು. 1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ. ಸರಕಾರಿ ವೈದ್ಯರಿಂದ ಕಾಲಕ್ಕನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ಮತ್ತು ವನಸಂಚಾರ ಅಭ್ಯಾಸ ಬೆಳೆಸಲಾಗುತ್ತಿದೆ. ಜೊತೆಗೆ ಹಣ್ಣುಹಂಪಲುಗಳನ್ನು ತಿನ್ನಿಸಲು ಕಳುಹಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅಮೀತ್, ಶ್ರದ್ಧಾ ಅಮೀತ್, ಡಾ| ಬಿ ಯಶೋವರ್ಮ, ಸೋನಿಯಾ ವರ್ಮ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ. ಶೆಟ್ಟಿ, ದೇವಳದ ಪಾರುಪತ್ತೆದಾರ ಪಿ ಲಕ್ಷ್ಮೀನಾರಾಯಣ ರಾವ್, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಹಾಗೂ ಹೆಗ್ಗಡೆ ಕುಟುಂಬಸ್ಥರು ಭಾಗಿಯಾಗಿದ್ದರು.