ಮೈಸೂರು: ಬೆಂಗಳೂರಿನ ಆರ್ಆರ್ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಮೈಸೂರಿನ ಕೆ ಆರ್ ಎಸ್ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಟ್ರಾಮ ಸೆಂಟರ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇವಿಎಂ ಯಂತ್ರಗಳ ಮೇಲೆ ಆರೋಪ ಮಾಡುವ ಮೂಲಕ ಪರೋಕ್ಷವಾಗಿ ಸೋಲು ಒಪ್ಪಿಕೊಂಡಿದ್ದಾರೆ.
ಸೋಲಿನ ಹತಾಶೆಯಲ್ಲಿ ಇವಿಎಂ ಯಂತ್ರಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡಿರೋದನ್ನು ನೋಡಿದರೆ ಬಹುಶಃ ರಿಸಲ್ಟ್ ವರೆಗೆ ಕಾಯುವ ತಾಳ್ಮೆ ಅವರಿಗಿಲ್ಲದೆ ಸೋಲೊಪ್ಪಿಕೊಂಡಿದ್ದಾರೆ. ಆರ್.ಆರ್ ನಗರದಲ್ಲಿ ಮುನಿರತ್ನ ಅಭಿವೃದ್ಧಿ ಮುಂದೆ ಕಾಂಗ್ರೆಸ್ ಗೆಲ್ಲಲ್ಲ. ಕಾಂಗ್ರೆಸ್ ಏನೇ ತಂತ್ರಗಾರಿಕೆ ಮಾಡಿದರೂ ಜನ ಬಿಜೆಪಿ ಪರ ಇದ್ದಾರೆ. ಅಭಿವೃದ್ಧಿ ಕೆಲಸಗಳು ಬಿಜೆಪಿ ಕೈ ಹಿಡಿಯಲಿವೆ. ಹೀಗಾಗಿ ಎರಡು ಕ್ಷೇತ್ರವನ್ನು ಬಿಜೆಪಿ ಅತ್ಯಧಿಕ ಮತಗಳಿಂದ ಗೆಲ್ಲಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದು, ಪುನರ್ ರಚಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ನಮಗೆ ಚುನಾವಣೆ ಪ್ರಚಾರ ಮಾಡೋದಕ್ಕೆ,ಮತ್ತು ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ಹೇಳುವುದಕ್ಕೆ ಮಾತ್ರ ಅಧಿಕಾರ ಇದೆ. ಆದರೆ ಸಚಿವ ಸಂಪುಟದ ಬಗ್ಗೆ ಮಾತನಾಡಲು ನನಗೆ ಅಧಿಕಾರವಿಲ್ಲ. ನಾನು ಹಾಗೆ ಹೇಳುವುದು ಸರಿಯಲ್ಲ ಎಂದರು.
ಈ ವೇಳೆ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.