ಹೊಸ ದಿಗಂತ ವರದಿ ಮೈಸೂರು:
ಅದೃಷ್ಟ ತರುವ ಎರಡು ತಲೆ ಹಾವೆಂದು ಜನರನ್ನು ನಂಬಿಸಿ, ಮಣ್ಣು ಮುಕ್ಕ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳ ಸಿಬ್ಬಂದಿ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕುಮಾರ್(32), ಶಿವಪ್ರಕಾಶ್ (32), ರವೀಶ್(44),ಚಂದ್ರ(38) ಬಂಧಿತರು. ಎರಡು ತಲೆ ಇರುವ ಹಾವನ್ನು ಮನೆಯಲ್ಲಿ ಸಾಕಿದರೆ ಅದೃಷ್ಟ ಬರುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಎರಡು ತಲೆಯ ಹಾವಿಗೆ ಬೇಡಿಕೆಯಿದೆ. ಜನರ ಈ ನಂಬಿಕೆಯನ್ನೇ ದುರ್ಬಳಕೆ ಮಾಡಿಕೊಂಡ ಈ ನಾಲ್ವರು, ಮನೆಯಲ್ಲಿ ಈ ಹಾವು ಇದ್ದರೆ ಆರ್ಥಿಕ ಪ್ರಗತಿಯಾಗುತ್ತೆ.
ಎಲ್ಲವೂ ಒಳಿತಾಗುತ್ತದೆ ಎಂದು ನಂಬಿಸಿ ಮಣ್ಣು ಮುಕ್ಕ ಹಾವನ್ನು ಎರಡು ತಲೆಯ ಹಾವೆಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ವಿಷಯ ತಿಳಿದು ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಮೋಸ ಮಾಡಿ ಹಾವು ಮಾರಾಟ ಮಾಡುತ್ತಿದ್ದ ಗ್ಯಾಂಗ್ನ್ನು ಬಂಧಿಸಿ, ಅವರಿಂದ ಒಂದು ಮಾರುತಿ ವ್ಯಾನ್, ಮೂರು ದ್ವಿಚಕ್ರ ವಾಹನ, ಬ್ಯಾಗ್ ನಲ್ಲಿದ್ದ ಮಣ್ಣು ಮುಕ್ಕ ಹಾವು ವಶಕ್ಕೆ ಪಡಿಸಿಕೊಂಡಿದ್ದಾರೆ.