ಮಂಗಳೂರು: ಎರಡು ದಶಕಗಳ ಬಳಿಕ ಕಡಲ ತಡಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ನ.5ರಂದು ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಪೂರ್ವಾಹ್ನ 10.30ರಿಂದ ಸಂಜೆ 5 ಗಂಟೆಯವರೆಗೆ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷರ ತವರು ನೆಲದಲ್ಲಿ ಕಾರ್ಯಕಾರಿಣಿ ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಕಾರ್ಯಕಾರಿಣಿ ಯಶಸ್ಸಿಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕಾರಿಣಿಯಲ್ಲಿ ಪಕ್ಷದ ಅನ್ಯಾನ್ಯ ಜವಾಬ್ದಾರಿ ಹೊತ್ತ ಪ್ರಮುಖರು, ರಾಜ್ಯದ 7 ಮೋರ್ಚಾಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ವಿವಿಧ ಪ್ರಕೋಷ್ಠದ ಸಂಚಾಲಕರು, ಸಹ ಸಂಚಾಲಕರು, ಪ್ರಭಾರಿಗಳು, ಸಹ ಪ್ರಭಾರಿಗಳು ಸೇರಿದಂತೆ ಒಟ್ಟು 120 ಮಂದಿ ಪಾಲ್ಗೊಳ್ಳಲಿದ್ದಾರೆ. ಸಂಘಟನಾತ್ಮಕ ಯೋಜನೆಯ ಚರ್ಚೆಗಳು, ಸಂಘಟನೆಯ ವಿಚಾರಗಳ ನಿರ್ಧಾರ, ಅಭಿವೃದ್ಧಿ ಕಾರ್ಯಗಳ ಚರ್ಚೆಗಳು ಸೇರಿದಂತೆ ಪ್ರಮುಖ ವಿಷಯಗಳ ಚರ್ಚೆ ಈ ಕಾರ್ಯಕಾರಿಣಿಯಲ್ಲಿ ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ಕೋರ್ ಕಮಿಟಿಯ ಸದಸ್ಯರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸಿ.ಟಿ.ರವಿ ಮತ್ತಿತರರು ಪಾಲ್ಗೊಳ್ಳುವರು. ಸಂಜೆ 5 ಗಂಟೆಯ ಸುಮಾರಿಗೆ ಸಭೆ ಪೂರ್ಣಗೊಳ್ಳಲಿದೆ. ಕೋರ್ ಕಮಿಟಿ ತಂಡದ ಸಭೆ ಕೂಡ ಇದೇ ಸಂದರ್ಭ ನಡೆಯಲಿದೆ. ಕಾರ್ಯಕಾರಿಣಿಯ ಯಶಸ್ಸಿಗೆ ಒಟ್ಟು 16 ವಿಭಾಗಗಳನ್ನು ಮಾಡಲಾಗಿದ್ದು ಸಿದ್ಧತೆಗಳು ಸಾಗಿವೆ. ಈ ನಿಟ್ಟಿನಲ್ಲಿ ಈಗಾಗಲೇ 2-3 ಸುತ್ತಿನ ಸಭೆಗಳು ಆಗಿವೆ. ನಗರದ ಅಲಂಕಾರ, ಬರುವ ಗಣ್ಯರಿಗೆ ಊಟ, ವಸತಿ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಲಾಗುತ್ತಿದೆ ಎಂದು ಸುದರ್ಶನ ಎಂ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಂಜೀವ ಮಠಂದೂರು, ಡಿ.ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ್, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಧ್ಯಮ ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ ಉಪಸ್ಥಿತರಿದ್ದರು.