ಚಿಕ್ಕಮಗಳೂರು: ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಎರಡೂ ಬೈಕ್ಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಗೆದ್ದಲಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಕಡೆಯಿಂದ ಹಾಸನಕ್ಕೆ ಹೋಗುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಯೂನಿಕಾರ್ನ್ ಬೈಕಿನಲ್ಲಿದ್ದ ಸವಾರ ಮಂಜುನಾಥ್(35) ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಬೈಕ್ಗಳು ಢಿಕ್ಕಿಯಾದ ರಭಸಕ್ಕೆ ಮಂಜುನಾಥ್ ಸ್ಥಳದಿಂದ ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾರೆ. ಪಲ್ಸರ್ ಬೈಕಿನಲ್ಲಿದ್ದ ಇಬ್ಬರು ಯುವಕರಲ್ಲಿ ಸಂಜಯ್ ಸ್ಥಿತಿ ಗಂಭೀರವಾಗಿದ್ದು, ಗೌತಮ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಢಿಕ್ಕಿಯ ರಭಸಕ್ಕೆ ಎರಡು ಬೈಕ್ಗಳು ಹೊತ್ತಿ ಉರಿದಿದ್ದು, ಸುಟ್ಟು ಕರಕಲಾಗಿವೆ. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿಯಲು ಬೈಕ್ ಸವಾರರ ಬಳಿ ಸ್ಯಾನಿಟೈಸರ್ ಇದ್ದದ್ದು ಕಾರಣ ಎನ್ನಲಾಗುತ್ತಿದೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.