ಕಾಸರಗೋಡು: ಎರ್ನಾಕುಳಂ ಜಿಲ್ಲೆಯ ಮುಂಞಮ್ಮಲ್ ಎಂಬಲ್ಲಿ 16ರ ಹರೆಯದ ಬಾಲಕಿ ಮೇಲೆ ಕಾಮುಕರ ತಂಡವೊಂದು ಸಾಮೂಹಿಕವಾಗಿ ಅತ್ಯಾಚಾರಗೈದ ಹೇಯ ಕೃತ್ಯ ನಡೆದ ಬಗ್ಗೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಉತ್ತರಪ್ರದೇಶದ ನಿವಾಸಿಗಳಾದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಾಹಿದ್, ಫರ್ಹಾದ್ ಖಾನ್, ಹನೀಫ್ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಮೂರು ಮಂದಿ ಆರೋಪಿಗಳಿದ್ದು , ಅವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಇದೇ ವೇಳೆ ನಾಪತ್ತೆಯಾದ ಇತರ ಮೂವರು ಆರೋಪಿಗಳು ಕೇರಳದಿಂದ ತಪ್ಪಿಸಿಕೊಂಡಿದ್ದಾರೆಂಬ ಬಗ್ಗೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಾರ್ಚ್ ನಿಂದ ಆಗಸ್ಟ್ ಇಲ್ಲಿಯ ವರೆಗೆ ಈ ಆರು ಮಂದಿ ಆರೋಪಿಗಳು ಬಾಲಕಿಗೆ ಬೆದರಿಕೆಯೊಡ್ಡಿ ನಿರಂತರ ಲೈಂಗಿಕ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಬಾಲಕಿ ತೀರಾ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕೌನ್ಸಿಲಿಂಗ್ ಗೆ ಒಳಪಡಿಸಿದಾಗಲೇ ದೌರ್ಜನ್ಯ ವಿಷಯ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆಯು ಇಡೀ ನಾಡಿನಲ್ಲಿ ಆಕ್ರೋಶ ಮೂಡುವಂತೆ ಮಾಡಿದೆ.