Monday, August 15, 2022

Latest Posts

ಎಲ್ಲರ ವಿಶ್ವಾಸ ಗಳಿಸಿಯೇ ಸಂಗೊಳ್ಳಿ ರಾಯಣ್ಣ ಮೂರ್ತಿ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗುತ್ತದೆ: ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು, ಗೃಹ ಸಚಿವರು, ಕಾಗಿನೆಲೆ ಶ್ರೀಗಳು ಮಾತನಾಡಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜಕ್ಕೆ ಹಿತವಾಗುವ ದೃಷ್ಟಿಯಿಂದ ಒಳ್ಳೆಯ ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವು ವಿಚಾರ ಇಡೀ ರಾಜ್ಯಾಧ್ಯಂತ ಸಾಕಷ್ಟು ವಿವಾದಕ್ಕೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಗುರುವಾರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಕರ್ನಾಟಕ ರಣಧೀರ ಪಡೆ, ಹಾಲುಮತ ಸೇರಿ ಸಾವಿರಾರು ರಾಯಣ್ಣ ಅಭಿಮಾನಿಗಳು ರಾಯಣ್ಣ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದರು.

ಈ ಸಂಬಂಧ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಗುರುವಾರ ಮುಂಜಾನೆ 11 ಗಂಟೆಗೆ ಹಾಲುಮತ ಸಮಾಜ, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರಾಯಣ್ಣ ಅಭಿಮಾನಿಗಳ ಜೊತೆ ಸಭೆ ನಿಗದಿ ಪಡಿಸಲಾಗಿತ್ತು. ಆದರೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಹಮ್ಮಿಕೊಂಡಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ತೆರಳಿದ್ದಾರೆ ಎಂದು ತಿಳಿಸಿದರು.

ಇನ್ನು ಮುಖ್ಯಮಂತ್ರಿಗಳು ಪೀರನವಾಡಿಯ ಮೊದಲಿದ್ದ ಸ್ಥಳದಲ್ಲಿಯೇ ರಾಯಣ್ಣ ಮೂರ್ತಿ ಸ್ಥಾಪಿಸುವಂತೆ ಸೂಚಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ ಹೀಗಾಗಿ ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಬೇಕಾಗುತ್ತದೆ. ಮಾಧ್ಯಮದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ರೀತಿ ನನಗೆನೂ ಹೇಳಿಲ್ಲ. ಸಭೆ ಮಾಡು ಅಂತಾ ಹೇಳಿದ್ದಾರೆ. ರಾಯಣ್ಣ ಮೂರ್ತಿ ಎಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.

ಮುಖ್ಯಮಂತ್ರಿಗಳು ಮೊದಲಿದ್ದ ಸ್ಥಳದಲ್ಲಿಯೇ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸುವಂತೆ ಹೇಳಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗನೇ ಈ ವಿವಾದ ಬಗೆಹರಿಸುತ್ತೇವೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಮಾಜಿ ಜಿ.ಪಂ.ಸದಸ್ಯ ರಾಜೇಂದ್ರ ಸಣ್ಣಕ್ಕಿ ಸೇರಿದಂತೆ ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss