ಮೈಸೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೃಷಿ ಸಾಲ ಮರುಪಾವತಿಗೆ ಮೂರು ತಿಂಗಳ ಬಡ್ಡಿ ವಿನಾಯಿತಿ ನೀಡಿ ಆದೇಶ ಹೊರಡಿಸಿರುವುದನ್ನು, ಮರುಪರಿಶೀಲಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಆಗ್ರಹಿಸಿದ್ದಾರೆ. ದೇಶದ ಆಹಾರ ಭದ್ರತೆ ದೃಷ್ಟಿಯಿಂದ, ರೈತರ ಸಂಕಷ್ಟವನ್ನು ಅರಿತು ಮೇ. 31ರ ತನಕ ಸಾಲ ಮರುಪಾವತಿ ಅವಧಿ ವಿಸ್ತರಣೆ ಮಾಡಿರುವ ಆದೇಶವನ್ನು ಪುನರ್ ಪರಿಶೀಲಿಸಿ, ಮಾ.31ರ 2021 ತನಕ ಬಡ್ಡಿ ವಿನಾಯಿತಿ ನೀಡಿ ಸಾಲ ನವೀಕರಣ ಮಾಡಿ ಗಡುವು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೋನಾ ಅನಿರೀಕ್ಷಿತ ಲಾಕ್ಡೌನ್ ನಿಂದ ಕೃಷಿ ಕ್ಷೇತ್ರ ಹಾಗೂ ರೈತರು ಭಾರಿ ಸಂಕಷ್ಟವನ್ನು ಎದುರಿಸುವಂತಾಯಿತು. ಆಹಾರ ಧಾನ್ಯ ಬೆಳೆದ ರೈತರ ಉತ್ಪನ್ನಗಳಿಗೆ ಶೇಕಡಾ 50ರಷ್ಟು ಬೆಲೆ ಕುಸಿತವಾಯಿತು. ಬತ್ತ ಮೆಕ್ಕೆಜೋಳ ,ಹತ್ತಿ, ಕಡಲೆ, ತೊಗರಿ ಮತ್ತಿತರ ಬೆಳೆಗಳು, ಹಣ್ಣು ತರಕಾರಿ ಬೆಳೆದ ರೈತರುಗಳಿಗೆ ಮಾರುಕಟ್ಟೆ, ಖರೀದಿದಾರರು ಇಲ್ಲದೆ ಹೊರರಾಜ್ಯ, ಹೊರದೇಶಕ್ಕೆ ಸರಬರಾಜಾಗುತ್ತಿದ್ದ ಉತ್ಪನ್ನಗಳು ನಿಂತ ಕಾರಣ, ಶೇಕಡಾ 40ರಷ್ಟು ಉತ್ಪನ್ನಗಳು ಕೊಳೆಯುವಂತಾಯಿತು, ರಸ್ತೆ-ಬದಿಗಳಲ್ಲಿ ಸುರಿವಂತಾಯಿತು, ರಾಜ್ಯದ ಉದ್ದಗಲಕ್ಕೂ ಬೆಳೆದ ದ್ರಾಕ್ಷಿ ಕರ್ಬುಜ , ಕಲ್ಲಂಗಡಿ, ಬಾಳೆ , ಪಪ್ಪಾಯ ಟೊಮೋಟೊ ಬೆಳೆಗಳನ್ನು ಕೆಲವು ರೈತರು ಜಮೀನಿನಲ್ಲಿಯೇ ಉಳುಮೆ ಮಾಡಿ ನಾಶಮಾಡಿದರು. ಮತ್ತೆ ಕೆಲವರು ರಸ್ತೆಬದಿಯಲ್ಲಿ ಸುರಿದರು. ರಾಜ್ಯದಲ್ಲಿ ಬೆಳೆದ ಶೇಕಡ 40ರಷ್ಟು ಹಣ್ಣು-ತರಕಾರಿಗಳು ಉಪಯೋಗಕ್ಕೆ ಬಾರದಂತಾಗಿದೆ.ಇದರಿಂದ ರೈತರಿಗೆ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕಬ್ಬು ಬೆಳೆದ ರೈತರಿಗೆ ನಾಲ್ಕೈದು ತಿಂಗಳಾದರೂ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಿದ ಇರುವ ಕಾರಣ, ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಸಕ್ಕರೆ ಬೆಲೆ ಕುಸಿದಿದೆ ಹೊರದೇಶಕ್ಕೆ ರಫ್ತು ಆಗುತ್ತಿಲ್ಲ ಎಂದು ಕಾರ್ಖಾನೆಗಳ ಮಾಲೀಕರು ಸಬೂಬು ಹೇಳುತ್ತಿದ್ದಾರೆ. ರಾಜ್ಯದ ರೈತರಿಗೆ ಸುಮಾರು 3,500 ಕೋಟಿ ಕಬ್ಬಿನ ಹಣ ಬಾಕಿ ಬರಬೇಕಾಗಿದೆ.
ಲಾಕ್ ಡೌನ್ ಕಾರಣದಿಂದ ನಷ್ಟಕ್ಕೆ ಸಿಲುಕಿ ಸಂಕಷ್ಟ ಅನುಭವಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ರೈತ, ಗುಲ್ಬರ್ಗ ಜಿಲ್ಲೆಯ ಅಳಂದ ತಾಲೂಕಿನ ರೈತ ಆತ್ಮಹತ್ಯೆಗೆ ಶರಣಾಗಿದ್ದು, ರೈತರ ಬದುಕು ಸಂಪೂರ್ಣ ನಾಶವಾಗಿದೆ. ಪಿಂಚಣಿದಾರರಿಗೆ ಎರಡು ತಿಂಗಳ ಪಿಂಚಣಿಯನ್ನು, ರಾಜ್ಯ ಸರ್ಕಾರಿ ನೌಕರರಿಗೆ ಮನೆಯಲ್ಲಿದ್ದರು, ಸಂಬಳವನ್ನು ನೀಡಿದೆ, ರೈತ ಹೊಸ ಬದುಕನ್ನು ರೂಪಿಸಿಕೊಳ್ಳಲು ಸರ್ಕಾರವೇ ವಿಶೇಷ ನೆರವಿನ ಯೋಜನೆಗಳನ್ನು ರೂಪಿಸಬೇಕು. ಇಂತಹ ಸಂದರ್ಭದಲ್ಲಿ ಈಗಾಗಲೇ ಹೊರಡಿಸಿರುವ ರೈತರ ಸಾಲ ಮರುಪಾವತಿ ವಿಸ್ತರಣೆ ಮಾಡಿರುವ ಆದೇಶದ ಗಡುವು ಪ್ರಯೋಜನವಾಗುವುದಿಲ್ಲ,
ಇನ್ನೂ ಮುಂದೆ ರೈತ ಕೃಷಿ ಚಟುವಟಿಕೆ ಆರಂಭಿಸಿ ಬಂದ ಹಣದಿಂದ ಕುಟುಂಬದ ಜೀವ ನಿರ್ವಹಣೆ ಮಾಡಿ, ಕೃಷಿ ಚಟುವಟಿಕೆ ನಡೆಸಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ
ರೈತರು ಪಡೆದಿರುವ ಎಲ್ಲಾ ರೀತಿಯ ಕೃಷಿ ಸಾಲಗಳಿಗೆ ಬಡ್ಡಿ ವಿನಾಯಿತಿ ನೀಡಿ 31ಮಾರ್ಚ್ ,2021ರ ತನಕ ಮರುಪಾವತಿ ಗಡುವು ವಿಸ್ತರಣೆ ಮಾಡಬೇಕು. ಕೃಷಿ ಚಟುವಟಿಕೆ ಆರಂಭಿಸಲು ಹೊಸದಾಗಿ ಸಾಲ ನೀಡುವ ಯೋಜನೆ ರೂಪಿಸಿ, ಹಣಕಾಸು ಸಂಸ್ಥೆಗಳಿಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವರಿಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೌರ್ನರ್ ಗೆ ರಾಜ್ಯದ ರೈತರ ಪರವಾಗಿ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ