Tuesday, June 28, 2022

Latest Posts

ಎಲ್ಲ ದೇಶ ಭಾರತದತ್ತ ತಿರುಗಿ ನೋಡುವ ರೀತಿ ಪ್ರಧಾನಿ ಕೆಲಸ ಮಾಡುತ್ತಿದ್ದಾರೆ: ನಳೀನ್ ಕುಮಾರ್ ಕಟೀಲು

ಬಾಗಲಕೋಟೆ: ದೇಶದಲ್ಲಿ ಪರಿವರ್ತನೆ ಗಾಳಿಯ ಬೀಸುತ್ತಿದೆ.ಜಗತ್ತಿನ ಎಲ್ಲ ದೇಶಗಳು ಭಾರತದತ್ತ ತಿರುಗಿ ನೋಡುವ ರೀತಿಯಲ್ಲಿ ನಮ್ಮ ದೇಶದ ಪ್ರಧಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲು ಹೇಳಿದರು.

ನಗರದ ಚರಂತಿಮಠದ ಶಿವಾನುಭವ ಮಂಟಪ ದಲ್ಲಿ ನೂತನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ  ಮಾತನಾಡಿದ ಅವರು, ಹಿಂದೆ ಯಾವ ಅಮೆರಿಕಾ ಮೋದಿಯವರಿಗೆ ವೀಸಾ ಕೊಡಲು ನಿರಾಕರಿಸಿತ್ತೋ ಅದೇ ದೇಶದ ಅಧ್ಯಕ್ಷರು ಬಂದು ಇವತ್ತು ಮೋದಿ ನನ್ನ ನೆಚ್ಚಿನ ಸ್ನೇಹಿತ ಎಂದು ಹೇಳುತ್ತಾರೆ ಎಂದರೆ ಅದು ಪರಿವರ್ತನೆಯ ಕಾಲಘಟ್ಟವಲ್ಲವೇ ಎಂದರು.
ಪಂಚಾಯ್ತಿ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣೆಗಳನ್ನು ಗೆಲ್ಲು ಈಗಿನಿಂದಲೇ ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವ ಸಂಕಲ್ಪ ತೊಡಬೇಕು ಎಂದು ಹೇಳಿದರು.

ಸೋನಿಯಾ ಗಾಂಧಿ, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಎಂದು ವ್ಯಕ್ತಿಗಳಿಗೆ ಜೈಕಾರ ಹಾಕುತ್ತಿದ್ದರು ಆದರೆ ಇವತ್ತು ಕಾಂಗ್ರೆಸ್ ಪಕ್ಷದ ವೇದಿಕೆ ಕಾರ್ಯಕ್ರಮದಲ್ಲಿ ಭಾರತ ಮಾತಾ ಕೀ ಜೈ ಎಂದು ಘೋಷಣೆ ಹಾಕುವಂತೆ ಮಾಡಿದ್ದು   ಪ್ರಧಾನಿ ನರೇಂದ್ರ ಮೋದಿಯವರು ಎಂದರು.

ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಆಗಿದೆ. ಯಾವುದೇ ಕತ್ತೆ ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗದಂತಹ ಸ್ಥಿತಿ ಇದೆ  ಎಂದು ಕಟೀಲು ಅವರು  ಕಾಂಗ್ರೆಸ್ ಪಕ್ಷದ ಈಗಿನ ಸ್ಥಿತಿಯ ಕುರಿತು ವ್ಯಂಗ್ಯವಾಡಿದರು. ಒಂದು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ಗೆ ರಾಜ್ಯಾಧ್ಯಕ್ಷ ಮಾಡಲು ಸಾಧ್ಯವಾಗುತ್ತಿಲ್ಲವೆಂದರೆ ಇನ್ನೂ ಕಾಂಗ್ರೆಸ್ ಪಕ್ಷದ ಸ್ಥಿತಿ ಏನಾಗಿರಬಹುದು ಎಂದು ಲೇವಡಿ ಮಾಡಿದರು.

ಕಮ್ಯುನಿಷ್ಟರ ಮನೆ ಮನೆಗಳಲ್ಲಿ ಅರಳಿದ ಕಮಲ :
ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯಿಂದ ಪರಿವರ್ತನೆಯ ಗಾಳಿಯ ಬೀಸುತ್ತಿದೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್,ಜೆಡಿಎಸ್ ಮತ್ತು ಕಮ್ಯುನಿಷ್ಟರ ಮನೆ ಮನೆಗಳಲ್ಲಿ ಕಮಲ ಅರಳಲಿದೆ.  ಕಾಂಗ್ರೆಸ್‌ದಿಂದ ಹಲವಾರು ನಾಯಕರು ಹೊರ ಬಂದು ಬಿಜೆಪಿ ಶಿಸ್ತಿನ ಪಕ್ಷವಾಗಿದೆ ಎಂದು ಸೇರಿಕೊಳ್ಳುತ್ತಿದ್ದಾರೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಅಭಿವೃದ್ಧಿಪರ ಕೆಲಸ ಮಾಡುತ್ತಿದ್ದು, ಸಮಾಜದ ಕಟ್ಟಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ಪ್ರಧಾನಿ ಮೋದಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಶಾಸಕ ವೀರಣ್ಣ ಚರಂತಿಮಠ, ಶಾಸಕ ಮುರಗೇಶ ನಿರಾಣಿ, ಶಾಸಕ ಸಿದ್ದು ಸವದಿ , ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಪಿ.ಎಚ್. ಪೂಜಾರ, ಎಂ.ಕೆ.ಪಟ್ಟಣಶೆಟ್ಟಿ, ಜಿ.ಎಸ್. ನ್ಯಾಮಗೌಡ
ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss